ನಾಡಿನ ರೈತರು, ಯೋಧರನ್ನು ದೇಶದ್ರೋಹಿಗಳಂತೆ ನಡೆಸಿಕೊಳ್ಳುವುದು ಹೊಲಸು ಮನೋಭಾವ: ನಟ ಕಿಶೋರ್
“ಪ್ರಶ್ನಿಸಬೇಕಾದ ಮಾಧ್ಯಮಗಳು ಚಪ್ಪಲಿ ನೆಕ್ಕುತ್ತಾ ಕೂರುತ್ತವೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿದ ಬಹುಭಾಷಾ ನಟ

ಬೆಂಗಳೂರು: ನಾಡಿನ ರೈತರನ್ನು, ಯೋಧರನ್ನು ದೇಶದ್ರೋಹಿಗಳಂತೆ ನಡೆಸಿಕೊಳ್ಳುವುದು ಹೊಲಸು ಮನೋಭಾವ ಎಂದು ನಟ ಕಿಶೋರ್ ಹೇಳಿದ್ದಾರೆ.
ದಿಲ್ಲಿಯಲ್ಲಿ ರೈತರ ಪ್ರತಿಭಟನೆಯ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, " ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದೇಶವಿಡೀ ಒಂದಾಗಿ ಬ್ರಿಟೀಷರ ವಿರುದ್ಧ ನಿಂತಾಗ ಬ್ರಿಟಿಷರ ಪರ ನಿಂತ ಜನರಿಂದ ಬೇರೇನು ನಿರೀಕ್ಷಿಸಲು ಸಾಧ್ಯ? ಪ್ರೀತಿಯ ದಿನದಂದು ದ್ವೇಷದ ಪ್ರತಿನಿಧಿಗಳ ಅಟ್ಟಹಾಸ, ಪ್ರಜೆಗಳ ಪ್ರತಿಭಟನೆಯ ದನಿಯಡಗಿಸುವುದು ಪ್ರಜಾಪ್ರಭುತ್ವ ಅಲ್ಲವೇ ಅಲ್ಲ. ವರ್ಷದ ಹಿಂದೆ ವರ್ಷಪೂರ್ತಿ ನಡೆದ ಹೋರಾಟದಲ್ಲಿ 700 ಜನ ರೈತರು ಪ್ರಾಣ ಬಿಟ್ಟಾಗ ನನಗಾಗಿ ಸತ್ತರೇ ಎಂದು ಕೇಳಿದವರಲ್ಲವೇ ಇವರು? ರೈತರ ಪಿಂಚಣಿ ಹಣ ಉಳಿಸಿ ತನ್ನ ಗೆಳೆಯರಿಗೆ ಹಂಚುವ ವ್ಯಾಪಾರಿಯಲ್ಲವೇ ಇವರು?" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ರೈತರ ದಾರಿಯಲ್ಲಿ ಹಳ್ಳ ತೋಡುತ್ತಾರೆ, ಮುಳ್ಳು ಹಾಕುತ್ತಾರೆ, ಅಶ್ರುವಾಯು ಸಿಡಿಸುತ್ತಾರೆ, ಲಾಠಿಚಾರ್ಜ್ ಮಾಡುತ್ತಾರೆ, ರೈತ ಮುಖಂಡರ x ಖಾತೆ ಬಂದ್ ಮಾಡುತ್ತಾರೆ. ಸೈನಿಕರನ್ನು ಕೂಲಿಪಡೆಯಾಳಾಗಿಸುತ್ತಾರೆ, ದೇಶದ ಹೆಣ್ಣುಮಕ್ಕಳನ್ನು ಬೀದಿಯಲ್ಲಿ ಎಳೆದಾಡುತ್ತಾರೆ. ಅತ್ಯಾಚಾರಿಗಳನ್ನು ಹೊರಗೆ ಸುತ್ತಲು ಬಿಟ್ಟು ಅಮಾಯಕರನ್ನು ಜೈಲಿಗೆ ತುಂಬುತ್ತಾರೆ. ಪ್ರಶ್ನಿಸಬೇಕಾದ ಮಾಧ್ಯಮಗಳು ಅವರ ಚಪ್ಪಲಿ ನೆಕ್ಕುತ್ತಾ ಕೂರುತ್ತವೆ. ಇದು ರಾಮ ರಾಜ್ಯವೊ? ಹರಾಮ್ ರಾಜ್ಯವೊ?? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.







