ಭೀಮಣ್ಣ ಖಂಡ್ರೆ, ಪ್ರೊ.ಮಾಧವ್ ಗಾಡ್ಗೀಳ್‍ರಿಗೆ ಉಭಯ ಸದನಗಳಲ್ಲಿ ಶ್ರದ್ಧಾಂಜಲಿ

ಬೆಂಗಳೂರು: ಮಾಜಿ ಸಚಿವ ಭೀಮಣ್ಣ ಖಂಡ್ರೆ, ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್ ಹಾಗೂ ಮಾಜಿ ಶಾಸಕ ಕೆ.ಲಕ್ಕಣ್ಣ ಅವರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರುಗಳ ಗದ್ದಲದ ಮಧ್ಯೆಯೇ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುರುವಾರ ‘ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರಿಗೆ ಅಪಮಾನ ಮಾಡಲಾಗಿದೆ’ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ‘ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ’ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್ ಸದಸ್ಯರ ಗದ್ದಲ-ಗೊಂದಲದ ನಡುವೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ಭೀಮಣ್ಣ ಖಂಡ್ರೆ, ಪ್ರೊ. ಮಾಧವ ಗಾಡ್ಗೀಳ್ ಹಾಗೂ ಕೆ.ಲಕ್ಕಣ್ಣರ ನಿಧನವಾಗಿರುವುದನ್ನು ಸದನಕ್ಕೆ ತಿಳಿಸಿದರು. ಭೀಮಣ್ಣ ಖಂಡ್ರೆಯವರು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಜನಿಸಿದ್ದು, ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಗಡಿಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಹೈ.ಕ.ವಿಮೋಚನೆಗಾಗಿ ಹೋರಾಡಿದ್ದು, ಕರ್ನಾಟಕ ಏಕೀಕರಣದ ರೂವಾರಿಯಾಗಿದ್ದರು ಎಂದು ಸ್ಮರಿಸಿದರು.
ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಪರಿಷತ್ ಸದಸ್ಯರಾಗಿದ್ದರು. ಕನ್ನಡ ಶಿಕ್ಷಣ, ಶರಣತ್ವದ ದೀಕ್ಷೆ ಪಡೆದಿದ್ದ ಖಂಡ್ರೆ ಉರ್ದು, ಪಾರ್ಸಿ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿದ್ದರು. ವೀರಶೈವ ಮಹಾಸಭೆಯ ರಾಷ್ಟ್ರೀಯಾಧ್ಯಕ್ಷ ಸೇವೆ ಸಲ್ಲಿಸಿದ್ದ ಅವರು, 6 ದಶಕಗಳ ಕಾಲ ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಮಾಧವ ಗಾಡ್ಗೀಳ್ ಪುಣೆಯಲ್ಲಿ ಜನಿಸಿದ್ದು, ಪರಿಸರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಾರಿಸರಿಕ ವಿಜ್ಞಾನ ಕೇಂದ್ರ ಮತ್ತು ಸೆಂಟರ್ ಪಾರ್ಕ್ ಥಿಯೇರಿಟಿಕಲ್ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಆಧುನಿಕ ಪರಿಸರ ಸಂಶೋಧನೆಗಳ ಅಧ್ಯಯನಕ್ಕೆ ನಾಂದಿ ಹಾಡಿದ್ದರು. ಪಶ್ಚಿಮ ಘಟ್ಟಗಳ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು. 250ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ, ಚಾಂಪಿಯನ್ ಆಫ್ ದಿ ಅರ್ಥ್ ಗೌರವಕ್ಕೆ ಪಾತ್ರರಾಗಿದ್ದರು. ಪದಶ್ರೀ, ಪದಭೂಷಣ, ಶಾಂತಿ ಸ್ವರೂಪ್ ಭಟ್ನಾಗರ್, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಗಾಡ್ಗಿಳ್ ಅವರು ಜ.7ರಂದು ನಿಧನ ಹೊಂದಿದ್ದಾರೆ ಎಂದು ವಿಷಾದಿಸಿದರು.
ಮಾಜಿ ಶಾಸಕ ಕೆ.ಲಕ್ಕಣ್ಣ ಅವರು ಕುಣಿಗಲ್ ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದ್ದರು. ಕೈಗಾರಿಕೋದ್ಯಮಿಯಾಗಿದ್ದ ಅವರು 2 ಬಾರಿ ಬೆಂಗಳೂರು ನಗರ ಪಾಲಿಕೆ ಸದಸ್ಯರಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಅವರು 1989ರಲ್ಲಿ ರಾಜಾಜಿನಗರ ಕ್ಷೇತ್ರದಿಂದ 9ನೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಜ.11ರಂದು ನಿಧನ ಹೊಂದಿದ್ದಾರೆ ಎಂದು ಸ್ಪೀಕರ್ ಖಾದರ್ ತಿಳಿಸಿದರು.
ಸ್ಪೀಕರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಭೀಮಣ್ಣ ಖಂಡ್ರೆ 103 ವರ್ಷಗಳ ಕಾಲ ಬದುಕಿದ್ದ ಶತಾಯುಷಿ. ನಾಲ್ಕು ಬಾರಿ ಶಾಸಕರಾಗಿದ್ದರು. ಮಹಾತ್ಮ ಗಾಂಧೀಜಿಯಿಂದ ಪ್ರೇರಣೆ ಪಡೆದು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಭಾಗವಹಿಸಿದ್ದರು ಎಂದು ಅವರ ಗುಣಗಾನ ಮಾಡಿದರು. ಅದೇ ರೀತಿಯಲ್ಲಿ ಮಾಜಿ ಶಾಸಕ ಕೆ.ಲಕ್ಕಣ್ಣ ಹಾಗೂ ಪರಿಸರ ತಜ್ಞ ಪ್ರೊ.ಮಾಧವ ಗಾಡ್ಗೀಳ್ ಅವರ ಗುಣಗಾನ ಮಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
ಆ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಶರಣಪ್ರಕಾಶ್ ಪಾಟೀಲ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಸದಸ್ಯರಾದ ಜಿ.ಟಿ.ದೇವೇಗೌಡ, ಎಂ.ಟಿ.ಕೃಷ್ಣಪ್ಪ, ಬಿ.ವೈ.ವಿಜಯೇಂದ್ರ, ಬಿ.ಆರ್.ಪಾಟೀಲ್ ಸೇರಿದಂತೆ ಇನ್ನಿತರ ಸದಸ್ಯರು ಸಂತಾಪ ಸೂಚಿಸಿದರು. ಅಗಲಿದ ಗಣ್ಯರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.







