ಶರಣಬಸವಪ್ಪ ಅಪ್ಪ, ಶ್ರೀಚಂದ್ರಶೇಖರನಾಥ ಸ್ವಾಮೀಜಿಗೆ ಸದನದಲ್ಲಿ ಶ್ರದ್ಧಾಂಜಲಿ

ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು: ಇತ್ತೀಚೆಗೆ ನಿಧನರಾದ ಜ್ಞಾನದಾಸೋಹಿ ಡಾ.ಶರಣಬಸವಪ್ಪ ಅಪ್ಪ ಹಾಗೂ ವಿಶ್ವ ಒಕ್ಕಲಿಗರ ಮಠದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರಿಗೆ ವಿಧಾನಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿ, ಈ ಇಬ್ಬರು ಸಂತರ ಅಗಲಿಕೆಯನ್ನು ಸದನಕ್ಕೆ ವಿಷಾದದಿಂದ ತಿಳಿಸಿದರು. ಆ ಬಳಿಕ ಮಾತನಾಡಿದ ಜವಳಿ ಸಚಿವ ಶಿವಾನಂದ ಪಾಟೀಲ್, ‘ಶರಣಬಸವಪ್ಪ ಅಪ್ಪ ಹೈ.ಕ.ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣ ನೀಡಿ, ಗೋಶಾಲೆ ಸ್ಥಾಪಿಸಿದ್ದಾರೆ. ಅವರು ಬಹುಮುಖ ವ್ಯಕ್ತಿತ್ವ ಉಳ್ಳವರು. ಅಪ್ಪ ಹಾಗೂ ಶ್ರೀ ಚಂದ್ರಶೇಖರನಾಥ ಸ್ವಾಮೀಜಿಯವರನ್ನು ಕಳೆದುಕೊಂಡು ರಾಜ್ಯ ಬಡವಾಗಿದೆ ಎಂದು ಹೇಳಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪ್ಪ ಅವರು ವಿದ್ಯಾ ಕ್ರಾಂತಿ ಮಾಡಿದ್ದರು. ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಧರ್ಮದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿದ್ದರು. ಇಬ್ಬರು ಸಂತರು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದರು.
ಜೆಡಿಎಸ್ ಸದಸ್ಯ ಶರಣಗೌಡ ಕಂದಕೂರ ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸವಪ್ಪ ಅಪ್ಪ ಅವರ ಹೆಸರನ್ನು ಇಡಬೇಕೆಂದು ಮನವಿ ಮಾಡಿದರು. ಬಿಜೆಪಿಯ ವಿಜಯೇಂದ್ರ, ಕಾಂಗ್ರೆಸ್ ಸದಸ್ಯ ಶರತ್ ಬಚ್ಚೇಗೌಡ, ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಇನ್ನಿತರರು ಅಗಲಿದ ಗಣ್ಯರ ಗುಣಗಾನ ಮಾಡಿದರು. ಆ ಬಳಿಕ ಎಲ್ಲರೂ ಎದ್ದು ನಿಂತು ಅಗಲಿತ ಸಂತರಿಗೆ ಮೌನ ಆಚರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.







