ಹಿಂದೂಗಳ ಅಂಗಡಿಗಳಿಗೆ ಬಹಿಷ್ಕಾರ ಹಾಕುವ ಮುಸ್ಲಿಮ್ ವ್ಯಕ್ತಿ: ವೈರಲ್ ವಿಡಿಯೊ ಹಿಂದಿನ ವಾಸ್ತವಾಂಶವೇನು?
► ಕರ್ನಾಟಕ ಪೊಲೀಸ್ ಫ್ಯಾಕ್ಟ್ ಚೆಕ್

ಬೆಂಗಳೂರು: ಮುಸ್ಲಿಮರು ಯಾರೂ ಹಿಂದೂಗಳ ಅಂಗಡಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸಬೇಡಿ ಎಂದು ಓರ್ವ ವ್ಯಕ್ತಿ ಕರೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಏಕರೂಪಿ ಸಿವಿಲ್ ಕೋಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂದೂಗಳಿಂದ ಯಾವುದೇ ವಸ್ತು ಖರೀದಿಸದಂತೆ ಮೌಲ್ವಿಯೊಬ್ಬರು ಕರೆ ನೀಡಿದ್ದಾರೆ ಎಂದು ಬಲಪಂಥೀಯರು ವ್ಯಾಪಕವಾಗಿ ಈ ವಿಡಿಯೋವನ್ನು ಹಂಚುತ್ತಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ತಂಡ ಸತ್ಯ ಪರಿಶೀಲನೆ ನಡೆಸಿದ್ದು, ಈ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿರುವುದು ಎಂದು ವರದಿ ಮಾಡಿದೆ.
ಈ ವಿಡಿಯೋ 2019 ರಲ್ಲಿ ಬಾರ್ಮರ್ ಜಿಲ್ಲೆಯ ಬಿಜ್ರಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಎಂದು ಬಾರ್ಮರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
28.6.2019 ರಂದು ಗಗಾರಿಯಾ ಗ್ರಾಮದ ಪೆಟ್ರೋಲ್ ಪಂಪ್ ಎದುರು ಖಾಸಗಿ ಬಸ್ ಅಪಘಾತಕ್ಕೀಡಾಗಿ ಒಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದರು. ಈ ಘಟನೆಯನ್ನು ವಿರೋಧಿಸಿ ಈ ಭಾಷಣವನ್ನು ಮೃತರ ಸಂಬಂಧಿ ಮಾಡಿದ್ದಾರೆ, ಕಾನೂನು ಪ್ರಕಾರ (ಅವರ ವಿರುದ್ಧ) ಕ್ರಮ ಕೈಗೊಳ್ಳಲಾಗಿದೆ ಎಂದು ಬಾರ್ಮರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಎಂದು ಫ್ಯಾಕ್ಟ್ ಚೆಕ್ ತಂಡದ ವರದಿ ಹೇಳಿದೆ.
ಹಾಗಾಗಿ, ಈ ಘಟನೆ ಬೆಂಗಳೂರಿಗೆ ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ ಎಂದು ಪೊಲೀಸ್ ಫ್ಯಾಕ್ಟ್ ಚೆಕ್ ತಂಡ ಹೇಳಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸದ, ಅನುಮಾನಾಸ್ಪದ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.







