ಅನಧಿಕೃತ ಕೃಷಿ ಪಂಪ್ಸೆಟ್ | ಮೂರು ತಿಂಗಳಲ್ಲಿ ಸಕ್ರಮ ಮಾಡಿಕೊಳ್ಳದಿದ್ದರೆ ವಿದ್ಯುತ್ ಸಂಪರ್ಕ ಕಡಿತ : ಸಚಿವ ಕೆ.ಜೆ.ಜಾರ್ಜ್

ಸಾಂದರ್ಭಿಕ ಚಿತ್ರ (PC : Gemini AI)/ ಕೆ.ಜೆ.ಜಾರ್ಜ್
ಬೆಂಗಳೂರು : ಅನಧಿಕೃತವಾಗಿ ಕೃಷಿ ಪಂಪ್ಸೆಟ್ಗಳಲ್ಲಿ ವಿದ್ಯುತ್ ಸಂಪರ್ಕ ಪಡೆದವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಮೂರು ತಿಂಗಳ ಅವಕಾಶ ನೀಡಲಾಗಿದ್ದು, ನಿಗದಿತ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪರಿಷತ್ತಿನ ಕಲಾಪದ ಗಮನ ಸೆಳೆಯುವ ಸೂಚನೆ ವೇಳೆ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಅನಧಿಕೃತ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಒಂದು ಕೃಷಿ ಪಂಪ್ಸೆಟ್ಗೆ ಸುಮಾರು 4.5 ಲಕ್ಷ ವೆಚ್ಚವಾಗಲಿದೆ. ಸರಕಾರವೇ 3 ಲಕ್ಷ ರೂಪಾಯಿ ಭರಿಸುತ್ತಿದೆ. ಬಾಕಿ 1.5 ಲಕ್ಷ ರೂ.ಗಳನ್ನು ಬಳಕೆದಾರರು ಪಾವತಿಸಬೇಕು. ಕೆಲವರು ಈ ಶುಲ್ಕ ಪಾವತಿಸಿಲ್ಲ. ಅವರಿಗೆ ಮೂರು ತಿಂಗಳು ಅವಕಾಶ ನೀಡಲಾಗಿದ್ದು, ಹಣ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ಸದಸ್ಯ ಗೋವಿಂದರಾಜು, ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದದ ವೆಚ್ಚಕ್ಕೂ ರಾಜ್ಯ ಸರಕಾರ ಭರಿಸುತ್ತಿರುವ ಮೊತ್ತದ ನಡುವೆ ಭಾರಿ ವ್ಯತ್ಯಾಸವಿದೆ. ತೀವ್ರ ಸಂಕಷ್ಟದಿಂದ ಎಸ್ಕಾಂಗಳು ಸಾಲದ ಮೊರೆ ಹೋಗಿದ್ದು 45 ಸಾವಿರ ಕೋಟಿ ರೂಪಾಯಿ ದಾಟಿದೆ. ಇದರಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತಕ್ಕೆ ಬರಬೇಕಾದ ಬಾಕಿ 19 ಸಾವಿರ ಕೋಟಿಯಿದೆ ಎಂದು ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಅನುಮತಿ ಪಡೆದು ದೀರ್ಘಾವಧಿ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯುತ್ ಖರೀದಿಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸಲು ಸಾಲದ ಮೊರೆ ಅನಿವಾರ್ಯವಾಗಿದೆ. ಬಜೆಟ್ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನವಿಲ್ಲ. ಪ್ರತಿವರ್ಷ ವಿದ್ಯುತ್ ಬೇಡಿಕೆ ಹೆಚ್ಚಾದಂತೆ ಬಂಡವಾಳ ವೆಚ್ಚ ಸರಿದೂಗಿಸಿ ನಿರ್ವಹಣೆಗಾಗಿ ಎಸ್ಕಾಂಗಳು ಹಾಗೂ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾಗಿದೆ ಎಂದು ವಿವರಿಸಿದರು.
ಪಡೆದ ಸಾಲವನ್ನು ಸಕಾಲಕ್ಕೆ ಸರಕಾರ ತೀರಿಸುತ್ತಿದೆ. ಗೃಹಜ್ಯೋತಿ, ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಸಬ್ಸಿಡಿ ಯೋಜನೆಗಳ ಸಂಬಂಧ ಸರಕಾರವು ನಿಗದಿತ ಸಮಯದಲ್ಲಿ ಎಸ್ಕಾಂಗಳಿಗೆ ಹಣ ಪಾವತಿಸಲಾಗುತ್ತಿದೆ. ವಿದ್ಯುತ್ ನಿರ್ವಹಣೆ ಹಾಗೂ ದುರಸ್ತಿಗಾಗಿ ಮೀಸಲಿಟ್ಟಿರುವ ಹಣವನ್ನು ಅನ್ಯ ಕಾರ್ಯಕ್ಕೆ ಬಳಸದಂತೆ ಸೂಚನೆ ನೀಡಲಾಗಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.







