ಕೇಂದ್ರ ಬಜೆಟ್ 2026 | ರಾಜ್ಯ ಕಾಂಗ್ರೆಸ್, ಬಿಜೆಪಿ ನಾಯಕರು ಹೇಳಿದ್ದೇನು?

ಬೆಂಗಳೂರು : ಕೇಂದ್ರ ಸರಕಾರದ ಬಜೆಟ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದು, ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಬಜೆಟ್ ಕುರಿತು ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಜನಹಿತದ ಬಜೆಟ್ ಎಂದು ಶ್ಲಾಘಿಸಿದ್ದಾರೆ.
ಕರ್ನಾಟಕ ಪಾಲಿಗೆ ನಿರಾಸೆ:
‘ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಈ ಬಜೆಟ್‍ನಲ್ಲೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ನಿರ್ಲಕ್ಷಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಬರಬೇಕಿದ್ದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದ ಜನತೆ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅತಿಹೆಚ್ಚು ಮಂದಿ ಸದಸ್ಯರನ್ನು ಆಯ್ಕೆ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ, ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ, ವಿ. ಸೋಮಣ್ಣ, ಪ್ರಹ್ಲಾದ್ ಜೋಶಿಯವರಂತಹ ನಾಯಕರು ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ’
-ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ
ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ:
‘ರವಿವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕ. ರಾಜ್ಯಕ್ಕಂತೂ ಹೇಳಿಕೊಳ್ಳುವಂತಹ ಪ್ರಯೋಜನ ಈ ಬಜೆಟ್‍ನಲ್ಲಿ ಆಗಿಲ್ಲ. ಶ್ರೀಗಂಧ ಬೆಳೆಗೆ ಉತ್ತೇಜನದ ಮಾತುಗಳನ್ನಾಡಿದೆ. ಆದರೆ ಅದು ಹೇಗೆ ಕಾರ್ಯಗತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಸ್ವಾಭಾವಿಕವಾಗಿ ಬೆಳೆಯುವ ಶ್ರೀಗಂಧದಲ್ಲಿ ತೈಲದ ಅಂಶ ಇರುತ್ತದೆ. ಆದರೆ, ರೈತರು ಜಮೀನಿನಲ್ಲಿ ಗೊಬ್ಬರ ಹಾಕಿ ಬೆಳೆಯುವ ಶ್ರೀಗಂಧಕ್ಕೆ ಹೆಚ್ಚಿನ ಬೆಲೆ ದೊರಕುವುದಿಲ್ಲ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಾರೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದೆ. ವರ್ಷಕ್ಕೆ 2ಕೋಟಿ ಉದ್ಯೋಗದ ಭರವಸೆ ನೀಡಿದ್ದ ಕೇಂದ್ರ ನುಡಿದಂತೆ ನಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ ತುಂಬಿದಂತಿದೆ’
-ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ
ಜವಳಿ, ಕೃಷಿ ಕ್ಷೇತ್ರದ ನಿರೀಕ್ಷೆಗಳು ಹುಸಿ:
ಬಾಂಗ್ಲಾದ ಪರಿಸ್ಥಿತಿಯ ಲಾಭ ಪಡೆದು ದೇಶದ ಜವಳಿ ಉದ್ಯಮ ಪುನಶ್ಚೇತನ ಹಾಗೂ ಕೃಷಿ ಆದಾಯ ದುಪ್ಟಟ್ಟುಗೊಳಿಸಿ ರೈತರ ಹಿತರಕ್ಷಣೆ ಮಾಡುವ ನಿಟ್ಟಿನಲ್ಲಿ ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಜವಳಿ ಉದ್ಯಮ ಪುನಶ್ಚೇತನ, ಬಂಡವಾಳ ಹೂಡಲು ಉದ್ಯಮಿಗಳ ಆಕರ್ಷಣೆ ಹಾಗೂ ಸಿದ್ದ ಉಡುಪು ರಫ್ತು ಬಗ್ಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡಬಹುದು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಸಮಸ್ಯೆ ಇದೆ. ಈ ಬಗ್ಗೆ ರಾಜ್ಯದವರೇ ಆಗಿರುವ ಸಚಿವ ಜೋಶಿಯವರು ಕೇಂದ್ರದ ಮೇಲೆ ಒತ್ತಡ ತರಬೇಕು’
-ಶಿವಾನಂದ ಪಾಟೀಲ್ ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ
"ಬಜೆಟ್ ಎಂದರೆ ಶ್ರೀಮಂತರ ಅನುಕೂಲಕ್ಕಾಗಿ ಇರುವ ವ್ಯವಸ್ಥೆ ಎಂದುಕೊಂಡು ಬಜೆಟ್ ತಯಾರಿಸುವ ಕೇಂದ್ರ ಸರಕಾರವು, ಕಾರ್ಪೊರೇಟ್ ಉದ್ಯಮಿಗಳಿಗೆ, ಎನ್‍ಆರ್‌ಐ ಗಳಿಗೆ ಮತ್ತು ಶ್ರೀಮಂತರಿಗೆ ಪೂರಕವಾಗಿ ಬಜೆಟ್ ರೂಪಿಸುತ್ತಿದೆಯೇ ವಿನಃ, ಜನ ಸಾಮಾನ್ಯರ ಪರವಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಇರುವುದು ಇವರ ಜನ ವಿರೋಧಿ ನೀತಿಗೆ ಹಿಡಿದ ಕನ್ನಡಿ. ಪ್ರತಿ ಬಾರಿಯೂ ಆದಾಯ ತೆರಿಗೆಯ ರೂಪು ರೇಷೆಗಳನ್ನು ತಯಾರಿಸುವ ಕೇಂದ್ರ ಸರಕಾರವು ಜನರಿಗೆ ಆದಾಯವನ್ನು ಪಡೆಯುವ ಮಾರ್ಗಗಳನ್ನು ಸೃಷ್ಟಿಸಲು ವಿಫಲವಾಗಿದೆ. ಅದರಲ್ಲೂ ಜಾರಿಯಲ್ಲಿದ್ದ ಮನರೇಗಾ ದಂತಹ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳನ್ನು ದುರ್ಬಲಗೊಳಿಸಿ ಜನರ ಉದ್ಯೋಗವನ್ನು ಕಿತ್ತುಕೊಳ್ಳಲು ಹೊರಟಿದೆ"
ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ
ನಿರುದ್ಯೋಗ, ಕೃಷಿ, ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಮಹತ್ವ ನೀಡಿಲ್ಲ :
‘ಕೇಂದ್ರದ ಬಜೆಟ್‍ನಲ್ಲಿ ದೇಶದ ಮುಂದಿನ ಭವಿಷ್ಯದ ಬಗ್ಗೆ ಯೋಜನೆಗಳಿಲ್ಲ, ಯಾವುದೇ ಸ್ಪಷ್ಟ ಯೋಜನೆಗಳನ್ನು ದೇಶಕ್ಕೆ ನೀಡಿಲ್ಲ. ನಿರುದ್ಯೋಗ, ಕೃಷಿ, ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಮಹತ್ವ ನೀಡಿಲ್ಲ. ಮೂರು ಏಮ್ಸ್ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿದ್ದು, ಮೂರು ಉತ್ತರ ಭಾರತದಲ್ಲಿ ಸ್ಥಾಪನೆ ಆಗುತ್ತಿದೆ. ಕರ್ನಾಟಕದ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿರುವುದಿಲ್ಲ. ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ, ಅನ್ಯಾಯ ಮಾಡಿದ್ದಾರೆ. ಹೈಸ್ಪೀಡ್ ರೈಲ್ವೆ ಕಾರಿಡಾರ್‍ಅನ್ನು ಬೆಂಗಳೂರು- ಮುಂಬೈಗೆ ಮಾಡಬೇಕಾಗಿತ್ತು’
-ಬಸವರಾಜ ರಾಯರೆಡ್ಡಿ ಸಿಎಂ ಆರ್ಥಿಕ ಸಲಹೆಗಾರ
ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ :
ಕೇಂದ್ರದ ಬಜೆಟ್‍ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೂ ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಇಂತಹ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು.
ಎಂ.ಬಿ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ
ಎಲ್ಲರನ್ನು ಮುಟ್ಟುವಂತಹ ಬಜೆಟ್:
‘ಭಾರತವನ್ನು ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ವಿಕಸಿತ ಭಾರತ ಕಟ್ಟುವಂತ ಅಭಿವೃದ್ದಿ ಶೀಲ ಮಾದರಿ ಬಜೆಟ್‍ನ್ನು ಮಂಡಿಸಲಾಗಿದೆ. ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿಯನ್ನು ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟನ್ನು ಮಂಡಿಸಿದ್ದು, ನಾಗರಿಕರ ಸಾಮಥ್ರ್ಯವನ್ನು ದೇಶದ ಆರ್ಥಿಕ ಚಟುವಟಿಕೆಯಲ್ಲಿ ಅಳವಡಿಸಲು ಯೋಜನೆಗಳನ್ನು ಹಲವಾರು ನೀತಿಗಳನ್ನು ಈ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಎಲ್ಲರ ವಿಕಾಸ ತತ್ವದ ಎಲ್ಲರನ್ನು ಒಳಗೊಂಡಿರುವ ಬಜೆಟ್ ಇದಾಗಿದೆ’
-ಬಸವರಾಜ ಬೊಮ್ಮಾಯಿ, ಸಂಸದ
ದೇಶದ ಸಮಗ್ರ ಬೆಳವಣಿಗೆಗೆ ಪೂರಕ ಬಜೆಟ್:
ಕೇಂದ್ರ ಬಜೆಟ್ ಕರ್ನಾಟಕವೂ ಸೇರಿದಂತೆ ದೇಶದ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ಐಟಿ ನವೀನತೆ, ಪ್ರವಾಸೋದ್ಯಮ ವಿಸ್ತರಣೆ, ಒಳನಾಡು ಜಲ ಸಂಪರ್ಕ, ಹೈಸ್ಪೀಡ್ ರೈಲು, ಎಂಎಸ್‍ಎಂಇಗಳು ಹಾಗೂ ಸೇವಾ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ, ಭವಿಷ್ಯಕ್ಕೆ ಸಿದ್ಧವಾದ ಕರ್ನಾಟಕದ ನಿರ್ಮಾಣಕ್ಕೆ ಈ ಬಜೆಟ್ ದೃಢವಾದ ನೆಲೆಯನ್ನು ಹಾಕಿದೆ. ಅರ್ಥ ವ್ಯವಸ್ಥೆಯ ಸೂಕ್ಷ್ಮ ಸಂಗತಿಗಳಿಗೂ ಆದ್ಯತೆ ನೀಡುವ ಮೂಲಕ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ, ಎಂಎಸ್ ಎಂಇ, ಮೂಲಸೌಕರ್ಯ, ಆರ್ಥಿಕ ಕಾರಿಡಾರ್‍ಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ. ಪರಿಸರ ಸಮತೋಲನಕ್ಕಾಗಿ ವಿಶೇಷ ಆದ್ಯತೆ ನೀಡಿರುವುದು ಈ ಬಜೆಟ್ ಇನ್ನೊಂದು ವಿಶೇಷ.
-ವಿ.ಸುನಿಲ್ ಕುಮಾರ್ ಬಿಜೆಪಿ ಶಾಸಕ
ಜನಪರ, ಅಭಿವೃದ್ಧಿ ಪರ:
‘ಕೇಂದ್ರದ ಬಜೆಟ್ ದೇಶದ ಆರ್ಥಿಕ ಸ್ಥಿರತೆ ಹಾಗೂ ಸಮಗ್ರ ಅಭಿವೃದ್ಧಿಗೆ ದಿಕ್ಕು ನೀಡುವಂತಿದ್ದು. ಸಾಮಾನ್ಯ ಜನ, ರೈತರು, ಯುವಕರು ಮತ್ತು ಮಹಿಳೆಯರ ಆಶಯಗಳನ್ನು ಒಳಗೊಂಡ ಜನಪರ ಬಜೆಟ್ ಆಗಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಮಂಡಿಸಲಾದ ಈ ಬಜೆಟ್ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಬಲ ನೀಡಲಿದೆ. ಕೃಷಿ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಇದು ದೇಶವನ್ನು ವಿಶ್ವದ ಆರ್ಥಿಕ ಶಕ್ತಿಯಾಗಿ ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ’
-ಕೆ.ಗೋಪಾಲಯ್ಯ, ಬಿಜೆಪಿಯ ಶಾಸಕ
ಕಾಂಗ್ರೆಸ್ ಟೀಕೆಗೆ ಉತ್ತರ:
‘ಕೇಂದ್ರದ ಬಜೆಟ್ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ.4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ.3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ 63,049ಕೋಟಿ ರೂ.ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು. ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ಪಂಚಾಯಿತಿ, ಪ್ರತಿ ಹಳ್ಳಿ ಮುಂಗಡಪತ್ರದಲ್ಲಿ ಒಳಗೊಂಡಿದೆ. ವಿಶಾಲ, ವಿಸ್ತೃತ, ವಿಕಾಸ, ಇದು ಮೋದಿ ಲೋಕದೃಷ್ಟಿ. ಅದಕ್ಕೆ ತಕ್ಕಂತೆ ಮುಂಗಡಪತ್ರ ಮೂಡಿ ಬಂದಿದೆ’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಒಂದು ಉತ್ತಮ ಬಜೆಟ್ :
ʼಕೈಗಾರಿಕೆ, ಪ್ರವಾಸೋದ್ಯಮ, ಐಟಿ, ಬಿಟಿ, ವಿಶೇಷವಾಗಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ. ಎಲ್ಲ ಕ್ಷೇತ್ರಗಳಿಗೆ ಅವರು ಆದ್ಯತೆ ನೀಡಿದ್ದಾರೆ. ಯುವ ಶಕ್ತಿಗೂ ಪೂರಕ ಬಜೆಟ್ ಮಂಡಿಸಿದ್ದಾರೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ನಾರಿ ಶಕ್ತಿಗೆ ಆದ್ಯತೆ ಕೊಟ್ಟಿದ್ದು, ಎಲ್ಲಕ್ಕಿಂತ ಪ್ರಮುಖವಾಗಿ ಹೊಸ ತೆರಿಗೆಗೆ ಅವಕಾಶ ನೀಡದೇ, ಹೊಸ ತೆರಿಗೆ ಹೇರದೇ ಸರ್ವಸ್ಪರ್ಶಿ, ಸರ್ವವ್ಯಾಪ್ತಿಯಡಿ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ. ಈ ದೇಶದ ಸರ್ವತೋಮುಖ ಅಭಿವೃದ್ಧಿಗೆ, ಮುಂದಿನ ದಿನಗಳಲ್ಲಿ ಭಾರತವು ಆರ್ಥಿಕವಾಗಿ ಇನ್ನಷ್ಟು ಸದೃಢವಾಗುವ ನಿಟ್ಟಿನಲ್ಲಿ, ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಒಂದು ಉತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆʼ
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ
ಸರ್ವಾಂಗೀಣ ಅಭಿವೃದ್ಧಿಗೆ ಪೂರಕ:
‘ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಒಂಭತ್ತನೇ ಬಾರಿಗೆ ಐತಿಹಾಸಿಕ ಬಜೆಟ್ ಮಂಡಿಸಿದ್ದು, ಅದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ರಾಷ್ಟ್ರದ ಸಾರ್ವಭೌಮತೆ ಎತ್ತಿಹಿಡಿದ ಬಜೆಟ್. 25 ಕೋಟಿ ಜನ ಹತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಬಜೆಟ್‍ನಲ್ಲಿ ಮೀನುಗಾರಿಕಾ ವಲಯಕ್ಕೆ ಉತ್ತೇಜನ, ಶ್ರೀಗಂಧ ಬೆಳೆಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಬಂಡವಾಳ ವೆಚ್ಚವನ್ನು ಬಜೆಟ್‍ನಲ್ಲಿ ಹೆಚ್ಚಿಸಲಾಗಿದೆ. ರಸಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕ ಕಡಿಮೆ ಆಗಿದೆ’
-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಜನಹಿತದ ಕೇಂದ್ರ ಬಜೆಟ್:
‘ಕೇಂದ್ರದ ಬಜೆಟ್ ಜನಹಿತದಿಂದ ಕೂಡಿದೆ. ಕೈಗಾರಿಕೆಗೆ ಒತ್ತು, ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದ್ದಾರೆ. ಮಹಿಳೆಯರು, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಿಸಲು ಕೇಂದ್ರವೇ ಮುಂದೆ ಬಂದಿದೆ. ಶ್ರೀಗಂಧ ಬೆಳೆಯಲು ಉತ್ತೇಜನ ನೀಡಲಾಗಿದೆ. ಹಲವು ಜಿಲ್ಲೆಗಳಲ್ಲಿರುವ ತೆಂಗಿಗೆ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಒದಗಿಸುವ ಕೆಲಸ ಮಾಡಲಾಗಿದೆ. ಮೊದಲ ಬಾರಿಗೆ ಪ್ರವಾಸಿ ಗೈಡ್‍ಗಳಿಗೆ ತರಬೇತಿ ಕೊಡುವ ಶಾಲೆ ಆರಂಭಿಸುತ್ತಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೂ ಒತ್ತು ಕೊಟ್ಟಿದ್ದಾರೆ’
-ಆರ್.ಅಶೋಕ್, ವಿಪಕ್ಷ ನಾಯಕ
ಯುವಶಕ್ತಿಯ ಬಜೆಟ್:
‘ಇದು ಜನಪ್ರಿಯತೆ ಗಳಿಸುವ ಬಜೆಟ್ ಆಗದೇ, ಯುವಶಕ್ತಿಯ ಬಜೆಟ್ ಆಗಿದೆ. ಯಾರನ್ನೂ ಓಲೈಕೆ ಮಾಡುವ ಕೆಲಸವನ್ನು ನಿರ್ಮಲಾ ಸೀತಾರಾಮನ್ ಮಾಡಿಲ್ಲ. ಯಾವುದರ ಮೇಲೆಯೂ ಹೆಚ್ಚಿನ ತೆರಿಗೆ ವಿಧಿಸಿಲ್ಲ. ಯುವಜನತೆಗೆ ಉತ್ತೇಜನ ಕೊಡುವ ರೀತಿಯಲ್ಲಿ ಎಂಎಸ್‍ಎಂಇಗೆ ಬಹಳಷ್ಟು ಒತ್ತು ನೀಡಿದ್ದಾರೆ. 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತುವ ಕೆಲಸ ಮಾಡಿದ್ದಾರೆ’
-ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ, ವಿಧಾನ ಪರಿಷತ್







