ಎತ್ತಿನಹೊಳೆ ಯೋಜನೆ ಆಕ್ಷೇಪಗಳನ್ನು ನಿವಾರಿಸುವುದಾಗಿ ಕೇಂದ್ರ ಸಚಿವರಿಂದ ಆಶ್ವಾಸನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡುವಂತೆ ಜಲಶಕ್ತಿ ಸಚಿವರಿಗೆ ಮನವಿ

Photo:X/@DKShivakumar
ಹೊಸದಿಲ್ಲಿ: ಎತ್ತಿನಹೊಳೆ ಯೋಜನೆ ವಿಚಾರವಾಗಿ ಎದುರಾಗಿರುವ ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಸ್ಪಷ್ಟನೆ ನೀಡಿದ್ದು, ಆಕ್ಷೇಪಗಳನ್ನು ನಿವಾರಣೆ ಮಾಡಲು ಸೂಕ್ತ ಕ್ರಮ ವಹಿಸಲಾಗುವುದೆಂದು ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ದಿಲ್ಲಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಇಬ್ಬರು ಸಚಿವರನ್ನು ಭೇಟಿ ಮಾಡಿದ್ದೇನೆ. ಕೇಂದ್ರ ಪರಿಸರ ಇಲಾಖೆ ಸಚಿವ ಭೂಪೇಂದರ್ ಯಾದವ್ ಭೇಟಿ ಮಾಡಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಕೊಟ್ಟಿರುವ ವಿಚಾರವನ್ನು ಅವರಿಗೆ ವಿವರಿಸಿದ್ದೇವೆ.
ಈ ಯೋಜನೆಯ ಸುಮಾರು ಶೇ.60-70ರಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಮಾಡಿರುವ ಆಕ್ಷೇಪಣೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಇದು ಕುಡಿಯುವ ನೀರಿನ ಯೋಜನೆಯಾಗಿದ್ದು, ಅತ್ಯುನ್ನತ ತಂತ್ರಜ್ಞಾನದ ಹಾಗೂ ಏಷ್ಯಾದ ಅತಿದೊಡ್ಡ ಮೇಲ್ಗಾಲುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ ಎಂದು ವಿವರಿಸಿದರು.
ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ಯೋಜನೆ ಬಗ್ಗೆ ಚರ್ಚೆ ಮಾಡಲಾಗಿದೆ. ಗೋವಾ, ನಮ್ಮ ರಾಜ್ಯದ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕಾನೂನು ತಂಡದ ಜೊತೆ ಚರ್ಚೆ ಮಾಡಲಾಗಿದೆ. ಮಹದಾಯಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ನಾವು ಟೆಂಡರ್ ಕರೆಯಲಾಗಿದ್ದು, ಕೆಲಸ ಮಾಡಬೇಕಾಗಿದೆ. ಕೇಂದ್ರ ಸರಕಾರ ದಿಟ್ಟ ತೀರ್ಮಾನ ಮಾಡಬೇಕಿದೆ ಎಂದು ತಿಳಿಸಿದರು.
ಪರ್ಯಾಯ ಭೂಮಿ: ಎತ್ತಿನಹೊಳೆ ಯೋಜನೆಯಲ್ಲಿ 423 ಎಕರೆ ಅರಣ್ಯ ಪ್ರದೇಶ ಬಳಕೆಗೆ ನಾವು ಈಗಾಗಲೇ ಪರ್ಯಾಯ ಭೂಮಿ ನೀಡಿದ್ದೇವೆ. ಈ ಜಾಗದಲ್ಲಿ 40-50 ವರ್ಷಗಳ ಹಿಂದೆ ರೈತರು ಜಮೀನು ಬಳಸುತ್ತಿದ್ದು, ನಾವು ಅವರಿಗೆ ಪರಿಹಾರ ನೀಡಿ ಈ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ ಎಂದರು.
ನಂತರ ಈ ಜಾಗ ಅರಣ್ಯ ಇಲಾಖೆಯದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಾವು ಈಗಾಗಲೇ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಈ ಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸ ಆಗಿದೆ. ಅಲ್ಲಿ ಕಾಲುವೆಗೆ ಅಗೆದಿರುವ ಮಣ್ಣನ್ನು ಪಕ್ಕದಲ್ಲಿ ಹಾಕಿರುವುದಕ್ಕೆ ತಕರಾರು ಎತ್ತಿದ್ದಾರೆ. ಈಗ ಅದನ್ನು ತೆರವುಗೊಳಿಸಲು ನಾವು ಒಪ್ಪಿದ್ದೇವೆ. ನಮಗೆ ಕೆಲಸ ಆಗಬೇಕು. ಈ ಯೋಜನೆಗೆ 24ಸಾವಿರ ಕೋಟಿ ರೂ. ಹೂಡಿಕೆ ಮಾಡಿದ್ದೇವೆ. ಈ ಎಲ್ಲ ವಿಚಾರ ತಿಳಿಸಿದ್ದು, ಅವರು ಅನುಮತಿ ನೀಡುವ ವಿಶ್ವಾಸ ನನಗಿದೆ ಎಂದರು.
‘ಭದ್ರಾ ಮೇಲ್ದಂಡೆ ಯೋಜನೆಯು ಮಧ್ಯ ಕರ್ನಾಟಕ ಭಾಗದ ದೊಡ್ಡ ಏತ ನೀರಾವರಿ ಯೋಜನೆ. ಈ ಯೋಜನೆ ಮೂಲಕ 29.90 ಟಿಎಂಸಿ ನೀರನ್ನು ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯ 2,25,515 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲಾಗುವುದು. ಜೊತೆಗೆ ಬರಪೀಡಿತ ತಾಲೂಕುಗಳ 367 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮರುಪೂರಣಕ್ಕೆ ನೆರವಾಗಲಿದೆ. ಈ ಯೋಜನೆ ಜಾರಿಗೆ ಪರಿಷ್ಕತ ಅಂದಾಜು ಮೊತ್ತ 21,473 ಕೋಟಿ ರೂ.ಆಗಿದೆ. ಈ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಒಪ್ಪಿಗೆ ನೀಡಿದೆ. ಇನ್ನು ಕೇಂದ್ರದ 2023-24ನೇ ಸಾಲಿನ ಬಜೆಟ್ನಲ್ಲಿ ಈ ಯೋಜನೆಗೆ 5,300 ಕೋಟಿ ರೂ.ಅನುದಾನ ಘೋಷಿಸಿತ್ತು. ಹೀಗಾಗಿ ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
Met Hon'ble Union Minister of Environment, Forest and Climate Change, Shri @byadavbjp in New Delhi today to discuss key projects in Karnataka that are pending environmental clearances.
— DK Shivakumar (@DKShivakumar) July 8, 2025
We emphasised the need for early forest clearance for the #Yettinahole Integrated Drinking… pic.twitter.com/1sozBq2AkH







