ಭವಿಷ್ಯದ EV ಪರಿಸರ ವ್ಯವಸ್ಥೆ ನಿರ್ಮಿಸಲು ಸರಕಾರ ಬದ್ಧ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮೇ 12 : ದೇಶದ ಶುದ್ಧ ಸಾರಿಗೆ ಪರಿವರ್ತನೆಗೆ ಬೆಂಬಲ ನೀಡಲು ಆಧುನಿಕ ಮತ್ತು ವಿಶ್ವಾಸಾರ್ಹ ಇವಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಭಾರತ ಸರಕಾರ ಬದ್ಧವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಭಾರತ ಸರಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯವು ಆಯೋಜಿಸಿದ್ದ ‘ಪಿಎಂ ಇ-ಡ್ರೈವ್ ಯೋಜನೆಯಡಿ ದೇಶಾದ್ಯಂತ ಇವಿ ಚಾರ್ಜಿಂಗ್ ಮೂಲಸೌಕರ್ಯ ಸಬಲೀಕರಣ’ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ 1,243 ಇವಿ ಚಾರ್ಜರ್ ಗಳ ಪ್ರಸ್ತಾವನೆಗಳಿಗೆ 123.26 ಕೋಟಿ ರೂ. ವೆಚ್ಚದ ಅನುಮೋದನೆಯನ್ನು ಘೋಷಿಸಿದ ಅವರು, ಈವರೆಗೆ ಒಟ್ಟು 503.86 ಕೋಟಿ ರೂ. ವೆಚ್ಚದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, ವಿವಿಧ ರಾಜ್ಯಗಳು ಮತ್ತು ಸಿಪಿಎಸ್‍ಇಗಳಾದ ಎಚ್‍ಪಿಸಿಎಲ್, ಐಒಸಿಎಲ್ ಮತ್ತು ಬಿಪಿಸಿಎಲ್ ಗಳ ಮೂಲಕ 4,874 ಇವಿ ಚಾರ್ಜರ್ ಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಈ ಯೋಜನೆಯು ಇ-2, ಇ-3 ಚಕ್ರದ ವಾಹನಗಳು, ಇ-ಬಸ್ ಗಳು, ಇ- ಆ್ಯಂಬುಲೆನ್ಸ್ ಗಳು ಮತ್ತು ಇ-ಟ್ರಕ್ ಗಳಿಗೆ ಬೆಂಬಲ ನೀಡುತ್ತದೆ. ಇವಿಗಳ ಉತ್ತೇಜನಕ್ಕಾಗಿ ಸಚಿವಾಲಯವು ಪಿಎಲ್‍ಐ ಆಟೋ (25,938 ಕೋಟಿ ರೂ.), ಪಿಎಲ್‍ಐ ಎಸಿಸಿ (18,100 ಕೋಟಿ ರೂ.), ಪೇಮೆಂಟ್ ಸೆಕ್ಯೂರಿಟಿ ಮೆಕ್ಯಾನಿಸಂ (3,435 ಕೋಟಿ ರೂ.) ಮತ್ತು ರೇರ್ ಅರ್ಥ್ ಮ್ಯಾಗ್ನೆಟ್ಸ್ ಯೋಜನೆಗಳನ್ನು (7,280 ಕೋಟಿ ರೂ.) ಜಾರಿಗೆ ತಂದಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬೃಹತ್ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ.ಹನೀಫ್ ಖುರೇಷಿ ಮಾತನಾಡಿ, ಕೇಂದ್ರ, ರಾಜ್ಯ ಸರಕಾರಗಳು ಮತ್ತು ಉದ್ಯಮದ ಪಾಲುದಾರರ ನಡುವಿನ ಸಮನ್ವಯವು ಸಮರ್ಥ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅತ್ಯಗತ್ಯ ಎಂದು ಹೇಳಿದರು.
ಸಮ್ಮೇಳನದಲ್ಲಿ ಕರ್ನಾಟಕ, ತೆಲಂಗಾಣ, ಕೇರಳ ಮತ್ತು ಒಡಿಶಾ ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿ ತಮ್ಮ ರಾಜ್ಯಗಳ ಅನುಷ್ಠಾನ ಕಾರ್ಯತಂತ್ರಗಳನ್ನು ಹಂಚಿಕೊಂಡರು.
ಪಿಎಂ ಇ-ಡ್ರೈವ್ ಯೋಜನೆಯು ಒಟ್ಟು 10,900 ಕೋಟಿ ರೂ.ಅನುದಾನ ಹೊಂದಿದ್ದು, ದೇಶಾದ್ಯಂತ ಸಾರ್ವಜನಿಕ ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 2,000 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಈ ಯೋಜನೆಯಡಿ ಸುಮಾರು 24.79 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು 3.16 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ ಪ್ರೋತ್ಸಾಹಧನ ನೀಡುವ ಗುರಿ ಹೊಂದಲಾಗಿದೆ. ಇದರ ಜೊತೆಗೆ, 14,028ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳ ನಿಯೋಜನೆಗಾಗಿ 4,391 ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ಆರ್ಥಿಕ ಬೆಂಬಲ ಒದಗಿಸಲು ಈ ಯೋಜನೆ ರೂಪಿಸಲಾಗಿದೆ. ಭಾರತವು ಸುಸ್ಥಿರ ಮತ್ತು ಸ್ವಾವಲಂಬಿ ಸಾರಿಗೆಯತ್ತ ಮುನ್ನಡೆಯುತ್ತಿದ್ದು, 2070ರ ವೇಳೆಗೆ ‘ನೆಟ್ ಝೀರೋ' ಹೊರಸೂಸುವಿಕೆಯ ಗುರಿ ತಲುಪಲು ಈ ಕ್ರಮಗಳು ನಿರ್ಣಾಯಕವಾಗಿವೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ






