ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ‘ಬಿ ರಿಪೋರ್ಟ್’ ಸಲ್ಲಿಕೆ

ಸೂರಜ್ ರೇವಣ್ಣ
ಬೆಂಗಳೂರು: ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಲಭ್ಯವಾಗದ ಕಾರಣ ಸಿಐಡಿ ಪೊಲೀಸರು ಎರಡನೇ ಬಾರಿಗೆ ‘ಬಿ ರಿಪೋರ್ಟ್’ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದ ಕಾರ್ಯಕರ್ತರೊಬ್ಬರಿಗೆ ಹೊಳೇನರಸೀಪುರದ ಗನ್ನಿಕಾಡ ಫಾರ್ಮ್ಹೌಸ್ನಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಎಂಬವರು ಸಂತ್ರಸ್ತನ ವಿರುದ್ಧ ಪ್ರತಿ ದೂರು ನೀಡಿದ್ದರು. ದೂರುದಾರ ವ್ಯಕ್ತಿಯು ಸುಳ್ಳು ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿ, 5 ಕೋಟಿ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ದೂರುದಾರ ಶಿವಕುಮಾರ್ ಸಲ್ಲಿಸಿದ್ದ ಮಾಫಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.
ಹೀಗಾಗಿ ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ತನಿಖೆಯನ್ನು ನಡೆದಿದ್ದ ಪೊಲೀಸರು ಮೊದಲನೇ ಬಾರಿಗೆ ‘ಬಿ' ವರದಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿದ ನ್ಯಾಯಾಲಯವು, ಪ್ರಕರಣದ ಮರು ತನಿಖೆಗೆ ಆದೇಶಿಸಿತ್ತು. ಈಗ ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಿ, ಸೂರಜ್ ಮೇಲೆ ಆರೋಪಕ್ಕೆ ಪೂರಕವಾಗಿ ಸಾಕ್ಷ್ಯಾಧಾರಗಳು ಹಾಗೂ ಯಾವುದೇ ಪುರಾವೆಗಳು ಲಭ್ಯವಾಗದ ಕಾರಣ ನ್ಯಾಯಾಲಯಕ್ಕೆ ‘ಬಿ ಅಂತಿಮ ವರದಿ’ ಸಲ್ಲಿಸಿದೆ. ಈ ಮೂಲಕ ಸೂರಜ್ ರೇವಣ್ಣ ಈ ಪ್ರಕರಣದಿಂದ ಮುಕ್ತಿ ಸಿಕ್ಕಾಂತಾಗಿದೆ.






