ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿಯೇ ‘ಉರ್ದು ಅಕಾಡೆಮಿ’: ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರು: ಈ ಹಿಂದಿನಂತೆಯೇ ಕರ್ನಾಟಕ ಉರ್ದು ಅಕಾಡೆಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ತರಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮಂಗಳವಾರ ನಗರದ ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆಎಂಡಿಸಿ ಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ, ‘ಮದ್ರಸಾ ಶಿಕ್ಷಕರಿಗೆ ಕನ್ನಡ ಕಲಿಸುವ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉರ್ದು ಅಕಾಡೆಮಿಯನ್ನು ಕನ್ನಡ ಸಂಸ್ಕೃತಿ ಇಲಾಖೆಯಡಿಯಲ್ಲಿ ತನ್ನಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರಷೋತ್ತಮ ಬಿಳಿಮಲೆ ಮನವಿ ಮಾಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲು ಬದ್ಧವಾಗಿದ್ದೇನೆ ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ಡಾ.ಪುರಷೋತ್ತಮ ಬಿಳಿಮಲೆ ಮಾತನಾಡಿ, ಉರ್ದು ಅಕಾಡೆಮಿಗೆ ಲಭ್ಯವಿರುವ ಸ್ವಾಯತ್ತತೆಯನ್ನು ಗೌಣವಾಗಿಸದೆ ಅದನ್ನು ಮುಖ್ಯವಾಹಿನಿಯಲ್ಲಿ ನಿರಂತರವಾಗಿ ಉಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ತರಬೇಕೆಂದು ಮನವಿ ಮಾಡಿದರು.
ಬೇರೆಲ್ಲಾ ಭಾಷೆಗಳ ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಗುರುತಿಸಿಕೊಂಡು ತಮ್ಮ ಕಾರ್ಯಕ್ರಮಗಳ ಮೂಲಕ ನಾಗರಿಕರ ಗಮನ ನಿರಂತರವಾಗಿ ಸೆಳೆಯುತ್ತಿದ್ದು, ಉರ್ದು ಅಕಾಡೆಮಿಯ ಅನುಪಸ್ಥಿತಿ ತಮ್ಮನ್ನು ಪದೇ ಪದೇ ಕಾಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಇಲಾಖೆಯ ಕಾರ್ಯಕ್ರಮಗಳಲ್ಲಿ ಉರ್ದು ಅಕಾಡೆಮಿಯೂ ಭಾಗವಹಿಸಿದಲ್ಲಿ ಹೆಚ್ಚಿನ ಜನಪ್ರಿಯತೆ ದೊರೆಯುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ತಮ್ಮ ಮನವಿಯನ್ನು ಪರಿಗಣಿಸಬೇಕು ಎಂದು ಅವರು ನುಡಿದರು.







