ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ; ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು, : ಕರ್ನಾಟಕದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ಬದಲು ಮತಪತ್ರ ಬಳಸಲು ರೂಪಿಸಲಾಗಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.
ಚುನಾವಣೆಯಲ್ಲಿ ಇವಿಎಂ ಕಾರ್ಯನಿರ್ವಹಣೆಯ ಕುರಿತು ಕಳವಳ ವ್ಯಕ್ತವಾಗಿದ್ದು, ಸಾರ್ವಜನಿಕ ನಂಬಿಕೆ ಮರುಸ್ಥಾಪಿಸಲು ಸದೃಢ ರಹಸ್ಯ ಮತದಾನ ಪದ್ಧತಿಗೆ ಮರಳುವುದು ಅವಶ್ಯಕ ಎಂದು ತಿದ್ದುಪಡಿ ಮಸೂದೆ ಪ್ರಸ್ತಾಪಿಸಿದೆ. ರಾಜ್ಯಪಾಲರ ಅಂಕಿತದೊಂದಿಗೆ ಮಸೂದೆಯು ಕಾಯ್ದೆಯಾಗಿದ್ದು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಗೆ ಅನುವಾಗಲಿದೆ.
ಸಂವಿಧಾನದ 326ನೇ ವಿಧಿ ಅಡಿ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಮುಖ್ಯವಾಗಿ, ಮತದಾರರ ಮತಪತ್ರದ ಗೋಪ್ಯತೆ ಖಚಿತಪಡಿಸಿಕೊಳ್ಳಲು ಮತ್ತು ಮತದಾರರನ್ನು ದಬ್ಬಾಳಿಕೆ, ಬೆದರಿಕೆ ಮತ್ತು ಅನಗತ್ಯ ಪ್ರಭಾವದಿಂದ ರಕ್ಷಿಸಿ, ಆ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಪಾವಿತ್ರ್ಯವನ್ನು ಸುರಕ್ಷಿತಗೊಳಿಸುವುದು ರಾಜ್ಯ ಸರಕಾರದ ಉದ್ದೇಶವಾಗಿದೆ.
ಜಿಲ್ಲಾ ಪಂಚಾಯತ್ನ ಪ್ರತಿಯೊಂದು ಮತ ಕ್ಷೇತ್ರದಲ್ಲಿ ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟು ಮತದಾರರ ಪಟ್ಟಿ ಸಿದ್ಧಪಡಿಸುವ ಹೊಣೆಯನ್ನು ಉಪ ವಿಭಾಗಾಧಿಕಾರಿಗೆ ನೀಡಲಾಗಿದೆ. ಈಗ ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ಆಧರಿಸಿ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದನ್ನು ಕೈಬಿಡಲಾಗಿದೆ. ರಾಜ್ಯ ಚುನಾವಣಾ ಆಯೋಗವೇ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸಲಿದೆ.






