ಸಚಿವರಾಗಿ ಯು.ಟಿ.ಖಾದರ್ ಪ್ರಮಾಣವಚನ ಸ್ವೀಕಾರ

ಯು.ಟಿ.ಖಾದರ್
ಬೆಂಗಳೂರು : ರಾಜ್ಯ ರಾಜಕಾರಣದ ಪ್ರಮುಖ ಸ್ಥಿತ್ಯಂತರದಲ್ಲಿ, ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಅಲಂಕರಿಸಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಶಿವಕುಮಾರ್ ಅವರ ಹೊಸ ಸಂಪುಟಕ್ಕೆ, ಕರಾವಳಿಯ ಪ್ರಭಾವಿ ನಾಯಕ ಹಾಗೂ ಮಾಜಿ ಸ್ಪೀಕರ್ ಯು.ಟಿ.ಖಾದರ್ ಅವರು ಸಚಿವರಾಗಿ ಸೇರ್ಪಡೆಗೊಳ್ಳುವ ಮೂಲಕ ಬಲ ತುಂಬಿದ್ದಾರೆ.
ಉಳ್ಳಾಲ ಕ್ಷೇತ್ರದ ಶಾಸಕರಾಗಿರುವ ಯು.ಟಿ.ಖಾದರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಉಳ್ಳಾಲ ಕ್ಷೇತ್ರವಾಗಿ ಪ್ರಚಲಿತವಾಗಿದ್ದ, ಈಗಿನ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2007ರಲ್ಲಿ ಶಾಸಕರಾಗಿದ್ದ ಯು.ಟಿ. ಫರೀದ್ ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ದಿವಂಗತ ಫರೀದ್ ಅವರ ಪುತ್ರ ಯು.ಟಿ.ಖಾದರ್ ಅವರು ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದವರು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರನಾಗಿ ಮಂಗಳೂರು ಕ್ಷೇತ್ರವನ್ನು ಯು.ಟಿ.ಖಾದರ್ ಪ್ರತಿನಿಧಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಆಡಳಿತದಲ್ಲಿ ಹಲವು ಮಂತ್ರಿಗಿರಿಯ ಜತೆಗೆ ಅತ್ಯುನ್ನತ ಸ್ಥಾನವಾದ ವಿಧಾನಸಭಾ ಸ್ಪೀಕರ್ ಹುದ್ದೆಯನ್ನು ಸುಮಾರು ಮೂರು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ನಸೀಮಾ ಮತ್ತು ಮಾಜಿ ಶಾಸಕ ಯು.ಟಿ.ಫರೀದ್ ದಂಪತಿ ಪುತ್ರನಾಗಿ ಕಾಸರಗೋಡಿನ ಉಪ್ಪಳದಲ್ಲಿ 1969ರ ಅಕ್ಟೋಬರ್ 12ರಂದು ಜನಿಸಿದ ಯು.ಟಿ.ಖಾದರ್ ತನ್ನ 38ರ ಹರೆಯದಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2008, 2013, 2018, ಹಾಗೂ 2023ರ ಚುನಾವಣೆಗಳಲ್ಲಿ ಸತತವಾಗಿ ಐದು ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ಎಸ್ಡಿಎಂ ಕಾನೂನು ಮಹಾವಿದ್ಯಾಲಯದಿಂದ ಎಲ್ಎಲ್ಬಿ ಪದವಿ ಪಡೆದಿರುವ ಯು.ಟಿ.ಖಾದರ್, ತಮ್ಮ ಕಾಲೇಜು ಅವಧಿಯಲ್ಲಿಯೇ ಯುವ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದವರು.
2013ರಲ್ಲಿ ಮೂರನೆ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಯು.ಟಿ.ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನ ದೊರಕಿತ್ತು. ಆರೋಗ್ಯಶ್ರೀ, ಬೈಕ್ ಆ್ಯಂಬುಲೆನ್ಸ್, 108 ಆ್ಯಂಬುಲೆನ್ಸ್ ಸೇವೆಗಳ ಮೂಲಕ ಗಮನ ಸೆಳೆದಿದ್ದ ಯು.ಟಿ.ಖಾದರ್ ಅವರು, 2016ರಿಂದ 2018ರವರೆಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿಯೂ ತಮ್ಮ ಆಡಳಿತ ನೈಪುಣ್ಯವನ್ನು ಪ್ರದರ್ಶಿಸಿದ್ದಾರೆ.
2018 ಮತ್ತು 2019ರಲ್ಲಿ ನಗರ ಅಭಿವೃದ್ಧಿ ಮತ್ತು ವಸತಿ ಖಾತೆ ಸಚಿವರಾಗಿಯೂ ಸೈ ಅನ್ನಿಸಿಕೊಂಡ ಯು.ಟಿ.ಖಾದರ್ 2021ರಿಂದ 2023ರ ಅವಧಿಯಲ್ಲಿ ವಿಧಾನಸಭೆಯ ವಿಪಕ್ಷ ಉಪನಾಯಕರಾಗಿದ್ದರು.






