ಉತ್ತರ ಕನ್ನಡ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಗೆ ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ಸದನದಲ್ಲಿ ಪೈಪೋಟಿ

ಬೆಳಗಾವಿ, (ಸುವರ್ಣ ವಿಧಾನಸೌಧ): ‘ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯ ಬೇಡಿಕೆ ಕುರಿತ ವಿಚಾರವು ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ‘ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲೇ ಸ್ಥಾಪಿಸಬೇಕು’ ಎಂಬ ಬಗ್ಗೆ ಪೈಪೋಟಿ ಏರ್ಪಟ್ಟ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ವೇಳೆ ಆಡಳಿತ ಪಕ್ಷದ ಸತೀಶ್ ಕೃಷ್ಣಸೈಲ್, ಕಾರವಾರ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ದಿನಕರ್ ಶೆಟ್ಟಿ, ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ಬೌಗೋಳಿಕವಾಗಿ ಸರಿಯಲ್ಲ. ಭಟ್ಕಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ಸೂಕ್ತ ಎಂದು ಆಗ್ರಹಿಸಿದರು.
ಬಳಿಕ ಎದ್ದು ನಿಂತ ಆಡಳಿತ ಪಕ್ಷದ ಭೀಮಣ್ಣ ಟಿ.ನಾಯಕ್, ಶಿರಸಿ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಬೇಕು ಎಂದು ಪಟ್ಟು ಹಿಡಿದರು. ಈ ಮಧ್ಯೆ ಮಾತನಾಡಿದ ಬಿಜೆಪಿ ಸದಸ್ಯ ಶಿವರಾಂ ಹೆಬ್ಬಾರ್, ಉತ್ತರ ಕನ್ನಡ ಜಿಲ್ಲೆ ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಎಂದು ಭೌಗೋಳಿಕ ವೈವಿಧ್ಯತೆಯನ್ನು ಹೊಂದಿದೆ. ಹೀಗಾಗಿ ಎರಡೂ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಉತ್ತರ ನೀಡಿದ ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಹಲವು ದಶಕಗಳಿಂದಲೂ ಕೇಳಿಬರುತ್ತಿದೆ. ರಾಜ್ಯ ಸರಕಾರ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ತಜ್ಞ ಸೇವೆಗಳನ್ನು ಒದಗಿಸುವ ಸಲುವಾಗಿ ನೆಪ್ರೋಲಜಿ, ಮೂತ್ರಶಾಸ್ತ್ರ, ನರವಿಜ್ಞಾನ, ನರಚಿಕಿತ್ಸೆ, ಕಾರ್ಡಿಯೋಲಜಿ, ಪ್ಲಾಸ್ಟಿಕ್ ಸರ್ಜರಿ, ಮಕ್ಕಳ ಶಸ್ತ್ರಚಿಕಿತ್ಸೆ ಎಂಬ ಏಳು ಹುದ್ದೆಗಳಿಗೆ ಎರಡು ಬಾರಿ ತಜ್ಞ ವೈದ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆದರೆ ಇದುವರೆಗೂ ಯಾರೂ ಅರ್ಜಿ ಸಲ್ಲಿಸಿಲ್ಲ. ಮೂರನೇ ಬಾರಿಗೂ ಅರ್ಜಿ ಆಹ್ವಾನಿಸಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಮುನ್ನ ಈ ಸೇವೆಗಳನ್ನು ದೊರಕಿಸಲು ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು. ಒಂದೇ ಜಿಲ್ಲೆಯ ಶಾಸಕರ ನಡುವೆ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಸ್ಥಾಪಿಸಲು ಪೈಪೋಟಿ ಏರ್ಪಟ್ಟಿದ್ದು, ಸದನದ ಸದಸ್ಯರ ಮಧ್ಯೆ ಹಾಸ್ಯಕ್ಕೂ ಕಾರಣವಾಯಿತು.







