ಎಸ್ಟಿಗೆ ಕುರುಬ ಸಮುದಾಯ ಸೇರ್ಪಡೆ ಮಾಡಿದರೆ ಮೀಸಲಾತಿ ಪ್ರಮಾಣ ಹೆಚ್ಚಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Photo: X/@siddaramaiah
ಬೆಂಗಳೂರು: ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ದ ಪಟ್ಟಿಗೆ ಸೇರ್ಪಡೆ ಮಾಡಿದರೆ ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂಬುವುದಕ್ಕೆ ನನ್ನ ಬೆಂಬಲವಿದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಐವರು ಸಾಧಕರಿಗೆ ವಾಲ್ಮೀಕಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಕುರುಬರನ್ನು ಎಸ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದು ನಾವಲ್ಲ. ಈ ಹಿಂದಿನ ಬಸವರಾಜ್ ಬೊಮ್ಮಾಯಿ ಸರಕಾರ. ಈ ಶಿಫಾರಸ್ಸಿನ ಬಗ್ಗೆ ಈಗ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ ಎಂದು ಸ್ಪಷ್ಟನೆ ನೀಡಿದರು.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಸೇರಿಸುವ ಸಂಬಂಧವಾಗಿ ಕೆ.ಎಸ್.ಈಶ್ವರಪ್ಪ ಹೋರಾಟ ಮಾಡಿದರು. ಅಂದು ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪ ಅವರ ಮನವಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಜನಸಂಖ್ಯೆ ಪ್ರಮಾಣದಷ್ಟೇ ಬಜೆಟ್ನಲ್ಲೂ ಹಣ ಮೀಸಲಿಡಲು ಕಾಯ್ದೆ ಮಾಡಿದ್ದು ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಹೋಬಳಿಗೊಂದರಂತೆ ವಸತಿ ಶಾಲೆ, ಮೊರಾರ್ಜಿ ಶಾಲೆಗಳನ್ನು ಮಾಡಿದ್ದು ಇದೇ ಸಿದ್ದರಾಮಯ್ಯ. ಹೀಗಾಗಿ ಈ ಇತಿಹಾಸವನ್ನೆಲ್ಲಾ ಚೆನ್ನಾಗಿ ತಿಳಿದುಕೊಳ್ಳಬೇಕು. ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಈ ಹಿಂದೆಯೇ ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ನಾನು ಮತ್ತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ರಾಮಕೃಷ್ಣ ಹೆಗಡೆಯವರಿಗೆ ಮನವಿ ಮಾಡಿದ್ದೆವು. ಹೆಗಡೆಯವರು ನಮ್ಮ ಮನವಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ ಒಡನಾಟ ಆಗಲೂ ಚೆನ್ನಾಗಿತ್ತು, ಈಗಲೂ ಚೆನ್ನಾಗಿದೆ. ದೇವೇಗೌಡರು ಮತ್ತು ಚಂದ್ರಶೇಖರ್ ಅವರ ಒಡನಾಡ ಚೆನ್ನಾಗಿತ್ತು. ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ಅವರನ್ನು ದೇವೇಗೌಡರ ಮೂಲಕ ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್ಟಿಗೆ ಸೇರಿಸಿದವರು ಉಗ್ರಪ್ಪ. ವಾಲ್ಮೀಕಿ, ಬೇಡ ಮತ್ತು ನಾಯಕ ಸಮುದಾಯಕ್ಕೆ ಮೀಸಲಾತಿ ದೊರಕಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು ಎಂದು ಸಿದ್ದರಾಮಯ್ಯ ಮೆಲುಕು ಹಾಕಿದರು.
ಜೆ.ಎಚ್.ಪಟೇಲರು ಸಿಎಂ ಆಗಿದ್ದಾಗ ಬೆಸ್ತರು ಸೇರಿ ಹಲವು ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಹೋಗಿದೆ. ಇವತ್ತಿನವರೆಗೂ ಇದು ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ದೇಶಕ್ಕೆ ಉತ್ತಮ ಮಹಾಗ್ರಂಥ ನೀಡಿದ ಮಹಾನಾಯಕ ಮಹರ್ಷಿ ವಾಲ್ಮೀಕಿ. ಇವರ ವಿಚಾರ ಗ್ರಂಥಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸರ್ವಾಂಗೀಣ ಪ್ರಗತಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಸಮುದಾಯದವರು ಅದನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಕುರುಬರನ್ನು ಎಸ್ಟಿಗೆ ಸೇರಿಸುವ ಕುರಿತು ಇದೀಗ ಚರ್ಚೆಯಾಗುತ್ತಿದ್ದು, ನಮ್ಮ ತಟ್ಟೆಯ ಅನ್ನವನ್ನು ಕಿತ್ತುಕೊಳ್ಳಲು ಬರಬೇಡಿ. ಮೀಸಲು ಪ್ರಮಾಣ ಹೆಚ್ಚಿಸಿದರೆ ನಮ್ಮದು ಯಾವುದೇ ಅಭ್ಯಂತರವಿಲ್ಲ. ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ಸುಮ್ಮನಿರಲ್ಲ. ಉಗ್ರ ಹೋರಾಟ ಮಾಡಲು ಸಿದ್ಧನಾಗಿರುವೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ವಿ.ಎಸ್.ಉಗ್ರಪ್ಪ, ವಾಲ್ಮೀಕಿ ಸಮುದಾಯದವರು ತಮ್ಮ ಮೂಲ ಜಾತಿ ಏನಿದೆಯೋ, ಅಂದರೆ ವಾಲ್ಮೀಕಿ, ನಾಯಕ, ಬೇಡರು ಹೀಗೆ ಅವರ ಮೂಲ ಜಾತಿಯನ್ನೇ ನಮೂದಿಸಬೇಕು. ಇಲ್ಲದಿದ್ದರೆ ಕೆಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಇದೇ ವೇಳೆ ಪತ್ರಕರ್ತ ನಾಗರಾಜು ಗಾಣದಹುಣಸೆ, ರಂಗಕರ್ಮಿ ಪಿ.ತಿಪ್ಪೇಸ್ವಾಮಿ, ಹೋರಾಟಗಾರ್ತಿ ಜೆ.ಕೆ.ಮುತ್ತಮ್ಮ, ಸಮಾಜ ಸೇವಕ ಮಳಸಿದ್ದ ಲಕ್ಷ್ಮಣ ನಾಯಕೋಡಿ ಮತ್ತು ಸಾಮಾಜಿಕ ಹೋರಾಟಗಾರ ಕೆ.ಉಚ್ಚಂಗಪ್ಪ ಅವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಾಸಕರಾದ ರಿಝ್ವಾನ್ ಅರ್ಹದ್, ಅಶೋಕ್ ಪಟ್ಟಣ್, ಬಸವರಾಜ್ ದದ್ದಲ್, ಅನ್ನಪೂರ್ಣ ತುಕಾರಂ, ಪರಿಷತ್ ಸದಸ್ಯರ ನಾಗರಾಜ್ ಯಾದವ್, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುಂದಿನ ಬಜೆಟ್ನಲ್ಲಿ ಘೋಷಣೆ:
ʼಬೆಂಗಳೂರಿನ ಸುಮನಹಳ್ಳಿಯ ಎರಡು ಎಕರೆ ಪ್ರದೇಶದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಮುಂದಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗುವುದು. ರಾಮಾಯಣದಂತಹ ಮಹಾನ್ ಗ್ರಂಥವನ್ನು ರಚಿಸಿದ ವಾಲ್ಮೀಕಿಯವರು ದೇಶ ಕಂಡ ಅಪರೂಪದ ಸಾಹಿತಿ. ವಾಲ್ಮೀಕಿಯವರು ಶೂದ್ರ ಜನಾಂಗದಲ್ಲಿ ಜನಿಸಿದ್ದರೂ, ಶ್ರೇಷ್ಠ ಗ್ರಂಥವನ್ನು ವಿಶ್ವಕ್ಕೆ ಪರಿಚಯಿಸಿದರು. ವಾಲ್ಮೀಕಿ ಹಾಗೂ ಕನಕದಾಸರಂತಹ ಮಹಾನ್ ಸಂತರು ಸಮಾಜಮುಖಿಯಾಗಿ ಬದುಕಿದವರು. ಅವರು ಬೋಧಿಸಿದಂತೆ ಮಾನವೀಯ ಮೌಲ್ಯಗಳನ್ನು ಅನುಸರಿದವರು’
-ಸಿದ್ದರಾಮಯ್ಯ, ಮುಖ್ಯಮಂತ್ರಿ







