ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣ: ED ವಿಚಾರಣೆಗೆ ಹಾಜರಾದ ಬಿ. ನಾಗೇಂದ್ರ

ಬಿ.ನಾಗೇಂದ್ರ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್ಎ) ಜಾರಿ ನಿರ್ದೇಶನಾಲವು(ಈ.ಡಿ.) ತನಿಖೆಯನ್ನು ನಡೆಸುತ್ತಿದ್ದು, ಸೋಮವಾರದಂದು ಪ್ರಕರಣದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ, ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಜಾಲಹಳ್ಳಿಯ ಎಚ್ಎಂಟಿ ಭವನದಲ್ಲಿರುವ ಈ.ಡಿ. ಕಚೇರಿಗೆ ಸೋಮವಾರ ಮಧ್ಯಾಹ್ನ ವಿಚಾರಣೆಗೆ ನಾಗೇಂದ್ರ ಹಾಜರಾಗಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಅಕ್ರಮ ಸಂಬಂಧ ನಾಗೇಂದ್ರ ವಿರುದ್ಧ ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ಈ.ಡಿ. ಬಂಧಿಸಿತ್ತು. ಅಲ್ಲದೆ ನಾಗೇಂದ್ರ ವಿರುದ್ಧ 2024ರಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು.
ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರಗೆ ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ, ಬ್ಯಾಂಕ್ ಅಧ್ಯಕ್ಷ ಇಟ್ಕಾರಿ ಸತ್ಯನಾರಾಯಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ. ಜಿ.ಜೆ. ಪದ್ಮನಾಭ, ಸಹಚರರಾದ ನಾಗೇಶ್ವರ ರಾವ್, ನೆಕ್ಕುಂಟಿ ನಾಗರಾಜ್ ಹಾಗೂ ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಈ.ಡಿ. ಚಾರ್ಜ್ ಶೀಟ್ನಲ್ಲಿ ದಾಖಲಿಸಿದೆ.
ಅವ್ಯವಹಾರ ಸಂಬಂಧ ಎಸ್ಐಟಿ ಹಾಗೂ ಸಿಬಿಐ ಪರ್ಯಾಯವಾಗಿ ತನಿಖೆ ನಡೆಸುತ್ತಿವೆ. ಪತ್ತೆ ಹಚ್ಚಲಾದ 89.62 ಕೋಟಿ ರೂ. ಹಣ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ವಿವಿಧ ಬ್ಯಾಂಕ್ಗಳಲ್ಲಿ ನಕಲಿ ಖಾತೆಗಳಿಗೆ ವರ್ಗಾವಣೆ ಆಗಿರುವುದು ತಿಳಿದುಬಂದಿದೆ.
2024ರ ಬಳ್ಳಾರಿ ಲೋಕಸಭಾ ಚುನಾವಣೆ ವೆಚ್ಚಕ್ಕಾಗಿ ವಾಲ್ಮೀಕಿ ನಿಗಮದ 20.19 ಕೋಟಿ ರೂ. ಹಣವನ್ನು ನಾಗೇಂದ್ರ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಖರ್ಚಿನ ಜೊತೆಗೆ ವೈಯಕ್ತಿಕ ಬಳಕೆಗೆ ವಿನಿಯೋಗಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ನಾಗೇಂದ್ರ ಆಪ್ತ ವಿಜಯ್ ಕುಮಾರ್ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಹಣ ಹಂಚಿಕೆ ಅವ್ಯವಹಾರ ಕಂಡುಬಂದಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ನಾಗೇಂದ್ರ ಮೊಬೈಲ್ ನಾಶಪಡಿಸುವುದಲ್ಲದೆ ಇನ್ನಿತರ ಆರೋಪಿಗಳಿಗೆ ಕೃತ್ಯದ ಬಗ್ಗೆ ಬಾಯಿಬಿಡದಂತೆ ಬೆದರಿಸಿದ್ದರು ಎಂದು ಅಧಿಕಾರಿಗಳು ಚಾರ್ಜ್ಶೀಟ್ನಲ್ಲಿ ವಿವರಿಸಿದ್ದರು.






