ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ : ಬಿ.ನಾಗೇಂದ್ರಗೆ ಸೇರಿದ 8 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬಿ.ನಾಗೇಂದ್ರ
ಬೆಂಗಳೂರು : ಜಾರಿ ನಿರ್ದೇಶನಾಲಯವು(ಈ.ಡಿ.) ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ(ಕೆಎಂವಿಎಸ್ಟಿಡಿಸಿಎಲ್) ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಸೇರಿದ ಸುಮಾರು 8 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಶುಕ್ರವಾರ ಜಾರಿ ನಿರ್ದೇಶನಾಲಯವು ಪ್ರಕಟನೆ ಹೊರಡಿಸಿದ್ದು, ನಿಗಮದ ನಿಧಿಯ ದುರುಪಯೋಗ ಮತ್ತು ಬೇರೆಡೆಗೆ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಸೇರಿದ ವಸತಿ, ವಾಣಿಜ್ಯ ಭೂಮಿ ಮತ್ತು ಕಟ್ಟಡ ಸೇರಿದಂತೆ ನಾಲ್ಕು ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ನಿಗಮದಿಂದ ಹಣದ ದುರುಪಯೋಗ ಅಪರಾಧಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಮತ್ತು ಸಿಬಿಐನಲ್ಲಿ ದಾಖಲಿಸಿರುವ ವಿವಿಧ ಎಫ್ಐಆರ್ಗಳ ಆಧಾರದ ಮೇಲೆ ಈ.ಡಿ. ತನಿಖೆಯನ್ನು ಪ್ರಾರಂಭಿಸಿತು. ಮೊದಲು, ಕರ್ನಾಟಕ ಮತ್ತು ಇತರ ರಾಜ್ಯಗಳಾದ್ಯಂತ ವಿವಿಧ ಸ್ಥಳಗಳಲ್ಲಿ ಪಿಎಂಎಲ್ಎ ಅಡಿಯಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಯಿತು.
ಪ್ರಕರಣದಲ್ಲಿ ಬಿ. ನಾಗೇಂದ್ರ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿ, ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದಕ್ಕೂ ಮುನ್ನ ಇತರ ಆರೋಪಿಗಳಿಗೆ ಸೇರಿದ 4.94 ಕೋಟಿ ರೂ.ಗಳ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು. ಈಗ ಬಿ. ನಾಗೇಂದ್ರ ಅವರಿಗೆ ಸೇರಿದ ನಾಲ್ಕು ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಈ.ಡಿ. ತಿಳಿಸಿದೆ.
ಈ ಆಸ್ತಿಗಳನ್ನು ಪಿಎಂಎಲ್ಎ ಅಡಿಯಲ್ಲಿ ‘ಅಪರಾಧದ ಆದಾಯ’ ಎಂದು ಈ.ಡಿ. ಗುರುತಿಸಿದೆ. ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಈ.ಡಿ. ಪ್ರಕಟನೆಯಲ್ಲಿ ಹೇಳಿದೆ.







