Vande Bharat Express | ಕರಾವಳಿಯ ಮೂಲಕ ಬೆಂಗಳೂರು–ಗೋವಾ ವಂದೇ ಭಾರತ್ ರೈಲು ಆರಂಭಿಸಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವಿ

ಎಚ್.ಡಿ.ಕುಮಾರಸ್ವಾಮಿ | Photo Credit : PTI
ಬೆಂಗಳೂರು: ಬೆಂಗಳೂರು ಮತ್ತು ಕರಾವಳಿ ಕರ್ನಾಟಕ–ಗೋವಾ ನಡುವಿನ ವೇಗದ ರೈಲು ಸಂಪರ್ಕಕ್ಕಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಕೇಂದ್ರದ ಭಾರೀ ಕೈಗಾರಿಕೆಗಳು ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಕರಾವಳಿಯನ್ನು ಸಂಪರ್ಕಿಸುವ ಘಾಟ್ ವಿಭಾಗದಾದ್ಯಂತ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರಕ್ಕೆ ಅಗತ್ಯ ಮೂಲಸೌಕರ್ಯ ಸಿದ್ಧವಾಗಿದೆ ಎಂದು ಅವರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಹಾಗೂ ಕಾರವಾರ ಮೂಲಕ ಬೆಂಗಳೂರು ಮತ್ತು ಮಡಗಾಂವ್(ಗೋವಾ) ಅನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಆರಂಭಿಸುವಂತೆ ಅವರು ಪ್ರಸ್ತಾಪಿಸಿದ್ದಾರೆ.
ಈ ರೈಲು ಕಾರಿಡಾರ್ ಪ್ರವಾಸೋದ್ಯಮ, ತೀರ್ಥಯಾತ್ರೆ, ಶಿಕ್ಷಣ ಹಾಗೂ ವೃತ್ತಿಪರ ಉದ್ದೇಶಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಭಾರತದ ಐಟಿ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ಕರ್ನಾಟಕ ಮತ್ತು ಗೋವಾದ ಪ್ರಮುಖ ವಾಣಿಜ್ಯ, ಬಂದರು ಮತ್ತು ಪ್ರವಾಸೋದ್ಯಮ ಕೇಂದ್ರಗಳ ನಡುವಿನ ಸಂಪರ್ಕವನ್ನು ಈ ಸೇವೆ ಮತ್ತಷ್ಟು ಬಲಪಡಿಸಲಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ನೈಋತ್ಯ ರೈಲ್ವೆಯ ಅಧಿಕಾರಿಗಳಿಗೆ ಪ್ರಸ್ತಾವಿತ ಸೇವೆಯ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸುವಂತೆ ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯ ಆರಂಭವು ಅಂತರರಾಜ್ಯ ಸಂಚಾರವನ್ನು ಸುಗಮಗೊಳಿಸುವ ಜೊತೆಗೆ ಪ್ರಾದೇಶಿಕ - ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.







