ಬೆಂಗಳೂರು-ಬೆಳಗಾವಿ ನಡುವೆ ʼವಂದೇ ಭಾರತ್ʼ ರೈಲು ಸಂಚಾರ ಶೀಘ್ರವೇ ಆರಂಭ : ವಿ.ಸೋಮಣ್ಣ

ವಿ.ಸೋಮಣ್ಣ
ಬೆಂಗಳೂರು : ಬೆಂಗಳೂರು-ಬೆಳಗಾವಿ ನಡುವೆ ನೂತನ ವಂದೇ ಭಾರತ್ ರೈಲು ಸಂಚಾರ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಂಗಳವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
ಈ ಭಾಗದ ಜನದಟ್ಟಣೆಯನ್ನು ಅರಿತು ಅಶ್ವಿನಿ ವೈಷ್ಣವ್ ಅವರು ಬೆಂಗಳೂರು-ಬೆಳಗಾವಿ ನಡುವೆ ನೂತನ ವಂದೇ ಭಾರತ್ ರೈಲಿನ ಸಂಚಾರಕ್ಕೆ ಅನುಮತಿ ನೀಡಿದ್ದಾರೆ. ಈ ರೈಲು ಸಂಚಾರದ ಅಧಿಕೃತ ದಿನಾಂಕ ಹಾಗೂ ಸಮಯವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಸೋಮಣ್ಣ ಹೇಳಿದ್ದಾರೆ.
ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲಿನ ಸಂಚಾರಕ್ಕೆ ಅನುಮತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.







