'ವಾರ್ತಾಭಾರತಿ'ಗೆ 'ಸೇಂಟ್ ಪೌಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ (SPNMA) 2025'
ಡಿಜಿಟಲ್ ಮಾಧ್ಯಮದಲ್ಲಿ ಶ್ರೇಷ್ಠ ಸಾಧನೆಗೆ ಸಂದ ಗೌರವ

ಬೆಂಗಳೂರು : ಬೆಂಗಳೂರಿನ ಸೇಂಟ್ ಪೌಲ್ಸ್ ಕಾಲೇಜು ನೀಡುವ ವಾರ್ಷಿಕ ಸೇಂಟ್ ಪೌಲ್ ನ್ಯಾಷನಲ್ ಮೀಡಿಯಾ ಅವಾರ್ಡ್ಸ್ (SPNMA) 2025ರ 'ಡಿಜಿಟಲ್ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ'ಗೆ 'ವಾರ್ತಾ ಭಾರತಿ' ಆಯ್ಕೆಯಾಗಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ಈ ವರ್ಷ ಸೇಂಟ್ ಪೌಲ್ಸ್ ಕಾಲೇಜು ಈ ಪ್ರಶಸ್ತಿಯನ್ನು ನೀಡುತ್ತಿದೆ.
"ವಾರ್ತಾಭಾರತಿ ಕಳೆದೆರಡು ದಶಕಗಳಿಂದ ನಡೆಸುತ್ತಾ ಬಂದಿರುವ ಉನ್ನತ ನೈತಿಕತೆಯ ಜನಪರ ಪತ್ರಿಕೋದ್ಯಮ, ವಸ್ತುನಿಷ್ಠ ವರದಿಗಾರಿಕೆ ಹಾಗು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಅಮೋಘ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ. ಮಾಧ್ಯಮ ಕ್ಷೇತ್ರಕ್ಕೆ ವಾರ್ತಾಭಾರತಿ ನೀಡಿರುವ ಕೊಡುಗೆಗಳು ಜವಾಬ್ದಾರಿಯುತ ಹಾಗು ಶ್ರೇಷ್ಠ ಪತ್ರಿಕೋದ್ಯಮದ ಹೊಸ ಮಾನದಂಡವನ್ನು ರೂಪಿಸಿವೆ" ಎಂದು ಸೇಂಟ್ ಪೌಲ್ಸ್ ಕಾಲೇಜಿನ ಪ್ರಶಸ್ತಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಎಂ.ಬಿ. ಜಯರಾಮ್ ಅವರಿಗೆ ಈ ಸಾಲಿನ ಸಾರ್ವಜನಿಕ ಸಂಪರ್ಕ ಮತ್ತು ಜೀವಮಾನ ಸಾಧನೆ ಪ್ರಶಸ್ತಿ, ಪ್ರಜಾವಾಣಿಯ ರವೀಂದ್ರ ಭಟ್ ಅವರಿಗೆ ಮುದ್ರಣ ಮಾಧ್ಯಮಗಳಲ್ಲಿನ ಶ್ರೇಷ್ಠ ಸಾಧನೆ ಪ್ರಶಸ್ತಿ, ʼವಾರ್ತಾಭಾರತಿʼಯ ಅಬ್ದುಸ್ಸಲಾಂ ಪುತ್ತಿಗೆ ಅವರಿಗೆ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಆರ್. ಗಿರೀಶ್ ಲಿಂಗಣ್ಣ ಅವರಿಗೆ ವಿಜ್ಞಾನ ಸಂವಹನದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಎಸ್. ಬಾಲಾ ಚೌಹಾಣ್ ಅವರಿಗೆ ತನಿಖಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಆರ್. ಅರವಿಂದ ಗೌಡ ಅವರಿಗೆ CSR ಸಂವಹನದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಟಿವಿ9 ವಾಹಿನಿಯ ಕಿರಣ್ ಎಚ್.ವಿ. ಅವರಿಗೆ ಅಪರಾಧ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ʼನ್ಯೂಸ್ ಫಸ್ಟ್ʼ ವಾಹಿನಿಯ ಮಾರುತಿ ಎಸ್.ಎಚ್ ಅವರಿಗೆ ಬ್ರಾಡ್‌ಕಾಸ್ಟ್ ಜರ್ನಲಿಸಂನಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಆರ್. ಪಿ.ಡಿ. ಸತೀಶ್ ಚಂದ್ರ ಅವರಿಗೆ ರೇಡಿಯೋ ಸಂವಹನದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಪ್ರೊ. ಶೈಲಶ್ರೀ ಬಿ ಅವರಿಗೆ ಮಾಧ್ಯಮ ಶಿಕ್ಷಣದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಎಸ್. ರಶ್ಮಿ ರಾವ್ ಅವರಿಗೆ ಪಾಡ್‌ಕಾಸ್ಟಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಚೇತನ್ ಕುಮಾರ್ ಅವರಿಗೆ ಬಾಹ್ಯಾಕಾಶ ಮತ್ತು ರಕ್ಷಣಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಎಸ್. ಶ್ರೀದೇವಿ ಅಯ್ಯಂಗಾರ್ ಅವರಿಗೆ ಜೀವನಶೈಲಿ ಮತ್ತು ಮನರಂಜನಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿ, ಎಂ.ಎಸ್. ಸುನೀತಾ ರಾವ್ ಅವರನ್ನು ಆರೋಗ್ಯ ಸಂವಹನ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಾರ್ಚ್ 14ರಂದು ಬೆಂಗಳೂರಿನ ಸೇಂಟ್ ಪೌಲ್ಸ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇಟಲಿಯ ಆಲ್ಬಾದಲ್ಲಿರುವ ಬ್ಲೆಸ್ಡ್ ಜೇಮ್ಸ್ ಅಲ್ಬೆರಿಯೊನ್ ಸ್ಥಾಪಿಸಿರುವ ಸೇಂಟ್ ಪೌಲ್ಸ್ ಕಾಲೇಜುಗಳು ಜಗತ್ತಿನ 32 ದೇಶಗಳಲ್ಲಿ ಮಾಧ್ಯಮ ಶಿಕ್ಷಣ ಸೇವೆ ಸಲ್ಲಿಸುತ್ತಿವೆ.