ಪಾಲಿಕೆ ವಿಭಜನೆ ನಿರ್ಧಾರ ಹಿಂಪಡೆಯದಿದ್ದರೆ ‘ಬೆಂಗಳೂರು ಬಂದ್’: ವಾಟಾಳ್ ನಾಗರಾಜ್

ಬೆಂಗಳೂರು : ಗ್ರೇಟರ್ ಬೆಂಗಳೂರು ಅಭಿವೃದ್ಧಿ(ಜಿಬಿಎ) ಕಾಯ್ದೆಯಡಿ ನಗರವನ್ನು ಐದು ಪಾಲಿಕೆಯಾಗಿ ವಿಭಜನೆ ಮಾಡುತ್ತಿರುವುದು ಕನ್ನಡಿಗರ ಅಸ್ತಿತ್ವಕ್ಕೆ ಮಾರಕ. ಇದರಿಂದ ಪರಭಾಷಿಕರ ಹಾವಳಿ ಹೆಚ್ಚಾಗಲಿದೆ. ಸರಕಾರ ಈ ಕೂಡಲೇ ವಿಭಜನೆ ನಿರ್ಧಾರವನ್ನು ಹಿಂಪಡೆಯದಿದ್ದರೆ ‘ಬೆಂಗಳೂರು ಬಂದ್’ಗೆ ಕರೆ ಕೊಡಬೇಕಾಗುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರವನ್ನು ವಿಭಜನೆ ಮಾಡುವುದರಿಂದ ನಗರದ ಪ್ರತಿಷ್ಠೆ, ಘನತೆಗೆ ಪೆಟ್ಟು ಬೀಳುತ್ತದೆ. ನಗರವನ್ನು ಒಂದು ತಾಲೂಕು ಮಟ್ಟಕ್ಕೆ ಇಳಿಸುವುದು ಸರಿಯಲ್ಲ. ಐದು ಜನ ಮೇಯರ್‌ಗಳು ಇರುವುದಕ್ಕೆ ಅರ್ಥವಿಲ್ಲ. ಜಿಬಿಎಗೆ ಮುಖ್ಯಮಂತ್ರಿ ಅಧ್ಯಕ್ಷ ಆಗಿರುವುದು ಸ್ಥಳೀಯ ಆಡಳಿತ ಧ್ಯೆಯೋದ್ದೇಶಕ್ಕೆ ವಿರುದ್ಧವಾದದ್ದು. ಪರಭಾಷಿಕರ ರಾಜಕೀಯ ಹಾವಳಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.
ಐದು ಪಾಲಿಕೆ ಮಾಡುವುದರ ಬದಲು, ನಗರ ಪಾಲಿಕೆಗೆ ಮೊದಲು ಚುನಾವಣೆ ನಡೆಸಲಿ. ನಗರದಲ್ಲಿ ವಿಪರೀತ ಕಸರಾಶಿ ಕಾಣುತ್ತಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಕಸ ಸಂಗ್ರಹಕ್ಕೆ ತೆರಿಗೆ ಹಾಕುತ್ತಿರುವುದನ್ನು ನಿಲ್ಲಿಸಬೇಕು. ರಸ್ತೆಗಳ ತುಂಬೆಲ್ಲ ಗುಂಡಿಗಳು ರಾರಾಜಿಸುತ್ತಿವೆ. ಕೆರೆಗಳು ಒತ್ತುವರಿಯಾಗಿ ಕಲುಷಿತವಾಗುತ್ತಿದ್ದರು ಅಧಿಕಾರಸ್ಥರು ಎಚ್ಚೆತ್ತುಕೊಳ್ಳುತ್ತಿಲ್ಲ. ಜನರಿಗೆ ಮೂಲಭೂತ ಸೌಲಭ್ಯಗಳನ್ನು ಸರಿಯಾಗಿ ಒದಗಿಸದೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹದ ಕುರಿತು ಆ.14 ರಿಂದ ಜನಜಾಗೃತಿ ಮೂಡಿಸಲಾಗುವುದು. ಸಾಹಿತಿಗಳು, ಚಲನಚಿತ್ರ ನಟರು, ಕಲಾವಿದರೊಂದಿಗೆ ಈ ವಿಷಯದ ಬಗ್ಗೆ ಚರ್ಚೆಗಳನ್ನು ಏರ್ಪಡಿಸುವ ಯೋಜನೆ ಇದೆ. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರಲಿಲ್ಲವೆಂದರೆ ಬೆಂಗಳೂರು ಬಂದ್‍ಗೆ ಕರೆ ಕೊಡಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾರ್ಥಸಾರಥಿ, ಗಿರೀಶ್ ಗೌಡ, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.







