ವೇದವ್ಯಾಸ್ ಕಾಮತ್ ವಿರುದ್ಧ ಪ್ರಕರಣ : ಸದನದಲ್ಲಿ ವಾಗ್ವಾದ

ಬೆಂಗಳೂರು : ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿರುವುದು ವಿಧಾನಸಭೆಯಲ್ಲಿ ವಾಗ್ವಾದಕ್ಕೆ ಕಾರಣವಾಯಿತು.
ಮಂಗಳವಾರ ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ವಿಷಯ ಪ್ರಸ್ತಾಪಿಸಿ, ವೇದವ್ಯಾಸ್ ಕಾಮತ್ ಅವರ ಮೇಲೆ ಎಫ್‍ಐಆರ್ ಹಾಕಲಾಗಿದೆ. ಇದರ ಉದ್ದೇಶವೇನು?. ವಿರೋಧ ಪಕ್ಷಗಳ ಹಕ್ಕುಗಳ ದಮನ ಮಾಡುವ ಪ್ರವೃತ್ತಿ ನಡೆಯುತ್ತಿದೆ ಎಂದಾಗ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇತರೆ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ಇದು ಗಂಭೀರ ವಿಚಾರ. ಸುಮ್ಮನೇ ಯಾರು ಎಫ್‍ಐಆರ್ ಹಾಕುವುದಿಲ್ಲ. ಒಂದು ವೇಳೆ ಅನಗತ್ಯವಾಗಿ ಪ್ರಕರಣ ದಾಖಲಿಸಿದ್ದರೆ ಅಧಿಕಾರಿ ತಪ್ಪು ಮಾಡಿದ್ದಾರೆ ಎಂದಾಗುತ್ತದೆ. ಹೆಚ್ಚಿನ ಮಾಹಿತಿ ಪಡೆದು ನಾಳೆ ಉತ್ತರಿಸುವೆ ಎಂದರು.
ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ನಾನು ದೇವಸ್ಥಾನಕ್ಕೆ ಹೋದಾಗ ಕೆಲವರು ನಿಂದನಾತ್ಮಕ ಮಾತುಗಳನ್ನಾಡುತ್ತಾರೆ. ದೇವಸ್ಥಾನದ ಕಾರ್ಯಕ್ರಮದಲ್ಲಿ ನಾನು ಹೋಗಿದ್ದು, ವಿಧಾನ ಪರಿಷತ್ ಸದಸ್ಯರೊಬ್ಬರು ವೇದಿಕೆಯಲ್ಲಿದ್ದರೂ, ನನಗಿಂತಲೂ ಮೊದಲೇ ಅವರು ಇಳಿದು ಹೋದರು. ಆದರೆ, ನಾನು ದೇವಸ್ಥಾನದಿಂದ ಹೊರ ಬಂದಾಗ ಅಲ್ಲಿದ್ದವರಿಗೆ ಪ್ರಸಾದ ನೀಡಿ ತೆರಳಿದ್ದೇನೆ ಎಂದರು.
ಆಗ ಮಾತು ಮುಂದುವರೆಸಲು ವೇದವ್ಯಾಸ್ ಕಾಮತ್ ಮುಂದಾದಾಗ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆಗ ಈ ವಿಚಾರದಲ್ಲಿ ಸಭಾಧ್ಯಕ್ಷರೇ ನೇರವಾಗಿ ಕ್ರಮ ಜರುಗಿಸಬೇಕು. ಶಾಸಕರ ರಕ್ಷಣೆಗೆ ಬರಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.
ನಿಮ್ಮ ಗದ್ದಲವನ್ನು ನನ್ನ ತಲೆಯ ಮೇಲೆ ಇಟ್ಟಿದ್ದೀರಾ ಎಂದು ಸಭಾಧ್ಯಕ್ಷರು ಹಾಸ್ಯ ಚಟಾಕಿ ಹಾರಿಸಿದರು. ನಾಳೆ(ಬುಧವಾರ) ಸಚಿವರು ಉತ್ತರ ನೀಡಲಿ, ನಂತರ ಮುಂದಿನ ಚರ್ಚೆ ಮಾಡೋಣ ಎಂದು ಯು.ಟಿ.ಖಾದರ್ ಸಲಹೆ ನೀಡಿದರು.







