ಹಿರಿಯ ಲೇಖಕಿ ಕಮಲಾ ಹೆಮ್ಮಿಗೆ ನಿಧನ

ಕಮಲಾ ಹೆಮ್ಮಿಗೆ
ಬೆಂಗಳೂರು, ಸೆ. 24; ಕನ್ನಡದ ಹಿರಿಯ ಲೇಖಕಿ ಕಮಲಾ ಹೆಮ್ಮಿಗೆ (71) ಅವರು ರವಿವಾರ ಧಾರವಾಡದಲ್ಲಿ ನಿಧನರಾಗಿದ್ದಾರೆ.
1952ರ ನವೆಂಬರ್ 20ರಂದು ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ ಜನಿಸಿದ ಅವರು, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಎಂ.ಎ.ಪದವಿ ಪಡೆದರು.
ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಗಳಿಸಿದರು. ಇದಲ್ಲದೆ ಮೈಸೂರು ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದರು.
ಆಕಾಶವಾಣಿಯ ಉದ್ಯೋಗಿಯಾಗಿದ್ದ ಕಮಲ ಹೆಮ್ಮಿಗೆ ಅವರು, ಧಾರವಾಡ ಮತ್ತು ಮಂಗಳೂರು ಕೇಂದ್ರಗಳಲ್ಲಿ ಹಾಗೂ ದೂರದರ್ಶನದ ಬೆಂಗಳೂರು ಮತ್ತು ಕೇರಳದ ತಿರುವನಂತಪುರದ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಅವಿವಾಹಿತರಾಗಿಯೇ ಇದ್ದ
ಹೆಮ್ಮಿಗೆ ಅವರು, ಧಾರವಾಡದಲ್ಲಿ ತಮ್ಮ ಅಕ್ಕನ ಮನೆಯಲ್ಲೇ ನೆಲೆಸಿದ್ದರು. ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ರೂಪಗಳಲ್ಲಿನ ಬರಹಗಳನ್ನು ನೀಡುತ್ತಾ ಬಂದಿದ್ದರು.
ಅವರ ಕೃತಿಗಳಲ್ಲಿ ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು, ನೀನೆ ನನ್ನ ಆಕಾಶ, ಮರ್ಮರ, ಕರುಳ ಸಂವಾದ ಮುಂತಾದ ಕಾವ್ಯಗಳಿವೆ. ಬದುಕೆಂಬ ದಿವ್ಯ, ಆಖ್ಯಾನ, ಕಿಚ್ಚಿಲ್ಲದ ಬೇಗೆ ಮುಂತಾದ ಕಾದಂಬರಿಗಳಿವೆ. ಮಾಘ ಮಾಸದ ದಿನ, ಬಿಸಿಲು ಮತ್ತು ಬೇವಿನ ಮರ, 'ನಾನು , ಅವನು ಮತ್ತು ಅವಳು', ಹನ್ನೊಂದು ಕಥೆಗಳು, ತ್ರಿಭಂಗಿ ಮುಂತಾದ ಕಥಾ ಸಂಕಲನಗಳಿವೆ. ಲಾವಣಿ-ಒಂದು ಹಕ್ಕಿ ನೋಟ, ಸವದತ್ತಿ ಎಲ್ಲಮ್ಮನ ಜಾತ್ರೆ, ಪಂಚಮುಖ, ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ಧತಿ: ಒಂದು ಅಧ್ಯಯನ ಮುಂತಾದ ಸಂಶೋಧನಾ ಕೃತಿಗಳಿವೆ. ಜ್ಞಾನಪೀಠ ಪುರಸ್ಕೃತ ಸೀತಾಕಾಂತ ಮಹಾಪಾತ್ರರ ಕಾವ್ಯಾನುವಾದ 'ಶಬ್ದಗರ್ಭಿತ ಆಕಾಶ' , ಶಶಿ ದೇಶಪಾಂಡೆಯವರ Dark holds no terror ಕಾದಂಬರಿಯ ಅನುವಾದ 'ಕತ್ತಲಲ್ಲಿ ಭಯವಿಲ್ಲ', ಮಲಯಾಳೀ ಲೇಖಕಿಯರ ಸಣ್ಣ ಕಥೆಗಳ ಅನುವಾದ ಸಂಕಲನ 'ಮಾಯಾ ಕನ್ನಡಿ', ಮಲಯಾಳದ ಲೇಖಕಿಯರ ಕಥೆಗಳ ಸಂಕಲನ 'ಪೆಣ್' , ಗ್ರೇಸಿ ಅವರ ಮಲಯಾಳದ ಕಥೆಗಳ ಅನುವಾದ 'ಮೆಟ್ಟಿಲಿಳಿದು ಹೋದ ಪಾರ್ವತಿ' , ಮಲಯಾಳಂ ಕತೆಗಳ ಸಂಕಲನ 'ಕೇರಳದ ಕಾಂತಾಸಮ್ಮಿತ', ಮಲಯಾಳದ ರಾಜಲಕ್ಷ್ಮಿಯವರ ಕಥೆಗಳು ಮುಂತಾದವು ಇವೆ. ಹನಿ ಹನಿ, ಹಾಡಿನ ಹಗೇವ, ಬಣ್ಣದ ಭರಣಿ, ದೇವರಿಗೆ ಶರಣೆನ್ನುವೆನೇ, ಮಂಗಳದ ಮಾಪೂರ, ಹೂವು ಬಿದ್ದಾವ ನೆಲಕ, ಪೊಳ್ಳಿನೊಳಗೆ ಪಕ್ಷಿ, ವೀರಭದ್ರ ದೇವರ ಒಡಬುಗಳು, ಕನಸ ಕೇಳವ್ವ, ಒಳಗಣ್ಣಿನ ಹೊರನೋಟ ಮುಂತಾದ ಸಂಪಾದನೆಗಳಿವೆ. ಸಂಕ್ರಮಣ, ಅಗ್ನಿ, ಸಕಾಲಿಕ, ಭಾನುವಾರ, ಕರುಣಾ ಸಂಚಿಕೆ ಮುಂತಾದ ಪತ್ರಿಕೆಗಳಲ್ಲಿ ಅಂಕಣಗಳನ್ನೂ ಮೂಡಿಸಿದ್ದರು.
ಕಮಲಾ ಹೆಮ್ಮಿಗೆ ಅನೇಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿನ ಸಮಾವೇಶಗಳಲ್ಲಿ, ನ್ಯಾಶನಲ್ ಬುಕ್ ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಹಾಗೂ ಅನೇಕ ವೇದಿಕೆಗಳಲ್ಲಿ ಸಾಹಿತ್ಯ ವಿಚಾರ ಮಂಡಿಸಿದ್ದರು.
ಶ್ರೀಯುತರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ಎಸ್.ಎನ್. ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ, ಮಾಸ್ತಿ ಕಾದಂಬರಿ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು.







