ಪರಿಷತ್ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕ ತಡೆ?

ದಿನೇಶ್ ಅಮೀನ್ ಮಟ್ಟು/ರಮೇಶ್ ಬಾಬು/ಡಿ.ಜಿ.ಸಾಗರ್/ಆರತಿ ಕೃಷ್ಣ
ಬೆಂಗಳೂರು : ವಿಧಾನ ಪರಿಷತ್ತಿನ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನಕ್ಕೆ ಶಿಫಾರಸು ಮಾಡಿದ್ದ ನಾಲ್ಕು ಹೆಸರುಗಳಿಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ತಾತ್ಕಾಲಿಕ ತಡೆ ಹಾಕಿದೆ ಎಂದು ತಿಳಿದು ಬಂದಿದೆ.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ದಲಿತ ಮುಖಂಡ ಡಿ.ಜಿ.ಸಾಗರ್ ಹಾಗೂ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಪಕ್ಷದ ಹೈಕಮಾಂಡ್ ಶಿಫಾರಸು ಮಾಡಿದೆ ಎಂದು ವರದಿಯಾಗಿತ್ತು.
ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರ ಹೆಸರಿದ್ದ ಶಿಫಾರಸು ಪತ್ರಕ್ಕೆ ಸಹಿ ಹಾಕಿದ್ದರು. ಅಲ್ಲದೆ, ರಾಜ್ಯಪಾಲರಿಗೆ ಪಟ್ಟಿಯನ್ನು ರವಾನಿಸಿದ್ದರು ಎನ್ನಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಎಐಸಿಸಿ, ನಾಲ್ಕು ಸ್ಥಾನಗಳ ನಾಮನಿರ್ದೇಶನವನ್ನು ತಡೆ ಹಿಡಿಯುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನಕ್ಕೆ ವಿವಿಧ ಕ್ಷೇತ್ರಗಳ ಸಾಧಕರ ಕೋಟಾದಲ್ಲಿ ಹಲವು ಮಂದಿ ಆಕಾಂಕ್ಷಿಗಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂಲಕ ಸಂಭಾವ್ಯರ ಪಟ್ಟಿ ಪಡೆದುಕೊಂಡಿದ್ದ ಎಐಸಿಸಿ ವರಿಷ್ಠ ನಾಯಕರು ಈ ನಾಲ್ವರನ್ನು ಅಂತಿಮಗೊಳಿಸಿದ್ದರು ಎನ್ನಲಾಗಿದೆ.
ಆ ಪೈಕಿ ರಮೇಶ್ ಬಾಬು ಈ ಹಿಂದೆ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ನಾಮ ನಿರ್ದೇಶನಕ್ಕೆ ಅವಕಾಶ ಪಡೆದವರಲ್ಲಿ ರಮೇಶ್ ಬಾಬು ಮತ್ತು ದಿನೇಶ್ ಅಮೀನ್ಮಟ್ಟು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೆ, ಡಿ.ಜಿ.ಸಾಗರ್ ಪರಿಶಿಷ್ಟ ಜಾತಿ(ಎಸ್ಸಿ)ಗೆ ಸೇರಿದ್ದರೆ, ಆರತಿ ಕೃಷ್ಣ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.







