ರವಿಕುಮಾರ್ ಅವರ ತೇಜೋವಧೆ, ಬೆದರಿಸುವ ಕೆಲಸ ಸರಿಯಲ್ಲ : ವಿಜಯೇಂದ್ರ
"ಸರಕಾರವು ವಿಪಕ್ಷದ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಲಿ"

ಬಿ.ವೈ.ವಿಜಯೇಂದ್ರ
ಬೆಂಗಳೂರು: ಕಾಂಗ್ರೆಸ್ಸಿಗರು ಅಧಿಕಾರ ಇದೆ ಎಂದು ದರ್ಪದಿಂದ ಮೆರೆದರೆ, ಅದಕ್ಕೆ ಉತ್ತರ ಕೊಡುವ ದಿನಗಳು ಹತ್ತಿರ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರ ಇವತ್ತು ಇರುತ್ತದೆ, ನಾಳೆ ಹೋಗುತ್ತದೆ. ಅಧಿಕಾರ ಶಾಶ್ವತವಲ್ಲ. ವಿಪಕ್ಷದವರಿಗೆ ಅವರದೇ ಆದ ಗೌರವ ಇದೆ. ಆ ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಆಡಳಿತ ಪಕ್ಷದವರ ಕರ್ತವ್ಯ. ಸರಕಾರ ಈಗಲಾದರೂ ಎಚ್ಚತ್ತುಕೊಳ್ಳಲಿ. ವಿಪಕ್ಷ ನಾಯಕರನ್ನು ಹೆದರಿಸುವುದು, ನಮ್ಮ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುವುದನ್ನು ಕೈಬಿಡಿ ಎಂದು ಆಗ್ರಹಿಸಿದರು.
ರವಿಕುಮಾರ್ ಅವರ ತೇಜೋವಧೆ, ಬೆದರಿಸುವ ಕೆಲಸ ಸರಿಯಲ್ಲ :
ಹೋರಾಟದ ಸಂದರ್ಭದಲ್ಲಿ ನಮ್ಮ ಹಿರಿಯರು, ವಿಧಾನಪರಿಷತ್ತಿನ ವಿಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಅವರು ಭಾಷಣದಲ್ಲಿ, ಅಲ್ಲಿನ ಜಿಲ್ಲಾಧಿಕಾರಿಗಳ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದರು. ಬಳಿಕ ರವಿಕುಮಾರ್ ಅವರು ತಮ್ಮ ಮಾತಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಆದರೂ, ಕಾಂಗ್ರೆಸ್ ಸರಕಾರದ ಕುಮ್ಮಕ್ಕಿನಿಂದ ದೂರು ಪಡೆದು ಎಫ್ಐಆರ್ ಮಾಡಿದ್ದಾರೆ. ರವಿಕುಮಾರ್ ಅವರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ, ಅಲ್ಲದೆ ಬೆದರಿಸುವ ಕೆಲಸ ಈ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರಕಾರಕ್ಕೆ ಪ್ರಾಮಾಣಿಕತೆ ಇದ್ದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಗೂಂಡಾ ವರ್ತನೆ ತೋರಿದವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕಿತ್ತು. ಅಧಿಕಾರಿಗಳು ಕಣ್ಮುಚ್ಚಿ ಕೂತ ಬಗ್ಗೆ ತನಿಖೆ ಮಾಡಿಸಬೇಕಿತ್ತು. ಅದನ್ನು ಬಿಟ್ಟು ಹಿಂದುಳಿದ, ದಲಿತ ನಾಯಕರನ್ನು ಗುರಿಯನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರನ್ನು ಬೆದರಿಸುವುದು, ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಕಮಲ್ ಹಾಸನ್ ಹೇಳಿಕೆಯಿಂದ ಕನ್ನಡಿಗರಿಗೆ ನೋವುಂಟಾಗಿದೆ :
ನಟ ಕಮಲ್ ಹಾಸನ್ ಅವರಿಗೆ ತಮಿಳಿನ ಕುರಿತ ಪ್ರೀತಿ, ಕಾಳಜಿ ನನಗೆ ಅರ್ಥವಾಗುತ್ತದೆ. ಅವರಿಗೆ ತಮಿಳು ಭಾಷೆ ಬಗ್ಗೆ ಪ್ರೇಮ ಇದೆಯೆಂದು ಕನ್ನಡ ಭಾಷೆ ಬಗ್ಗೆ ಇಂಥ ಹೇಳಿಕೆ ಕೊಡುವುದು ಖಂಡಿತ ಸರಿಯಲ್ಲ. ಕನ್ನಡ ಮತ್ತು ತಮಿಳು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕಮಲ್ ಹಾಸನ್ ಅವರ ಹೇಳಿಕೆಯಿಂದ ಕನ್ನಡಿಗರಿಗೆ ನೋವುಂಟಾಗಿದೆ. ಅನೇಕ ಪ್ರತಿಕ್ರಿಯೆಗಳ ಬಳಿಕ ಕೂಡ ಕ್ಷಮೆ ಕೇಳುವುದಿಲ್ಲ ಎಂದಿರುವುದು ದುರಹಂಕಾರದ ನಡೆ. ಕಮಲ್ ಹಾಸನ್ ಅವರು ಈ ರೀತಿ ವಿಷಬೀಜ ಬಿತ್ತಬಾರದು ಎಂದು ತಿಳಿಸಿದರು.
ಸದೃಢ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ :
ಸಂಘಟನೆಯನ್ನು ಬಲಪಡಿಸುವುದು ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ಕಣ್ಮುಂದೆ ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕುರಿತು ಇಂದಿನ ಕೋರ್ ಕಮಿಟಿ ಸಭೆಯಲ್ಲಿ ನಾವು ಚರ್ಚಿಸಲಿದ್ದೇವೆ ಎಂದು ತಿಳಿಸಿದರು.







