ಮುಖ್ಯಮಂತ್ರಿ ಬಗ್ಗೆ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್ ಶಾಸಕರು: ವಿಜಯೇಂದ್ರ

ಶಿವಮೊಗ್ಗ: ಮುಖ್ಯಮಂತ್ರಿಗಳ ಬಗ್ಗೆ ಆಡಳಿತ ಪಕ್ಷವಾದ ಕಾಂಗ್ರೆಸ್ಸಿನ ಶಾಸಕರಿಗೇ ವಿಶ್ವಾಸ ಇಲ್ಲವಾಗಿದೆ, ರಾಜ್ಯದ ಜನರಿಗೂ ವಿಶ್ವಾಸ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಜಕೀಯ ವಿದ್ಯಮಾನಗಳು ಯಾವ ರೀತಿ ಆಗಲಿದೆ. ಸ್ಥಾನಪಲ್ಲಟ ಯಾವ ರೀತಿ ಆಗಲಿದೆ ಎಂಬುದನ್ನು ನಾವು ಕಾದು ನೋಡುತ್ತೇವೆ. ಸ್ಥಾನಪಲ್ಲಟ ಆದರೆ ನಮಗೇನೂ ವ್ಯತ್ಯಾಸ ಆಗುವುದಿಲ್ಲ. ರಾಜ್ಯದ ಜನರಿಗೂ ವ್ಯತ್ಯಾಸ ಆಗುವುದಿಲ್ಲ. 15 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಹಣಕಾಸು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಯಾರೇ ಮುಖ್ಯಮಂತ್ರಿ ಆದರೂ ರಾಜ್ಯವು ಅಭಿವೃದ್ಧಿ ಕಾಣಲು ಸಾಧ್ಯವಾಗದು ಎಂದು ಹೇಳಿದರು.
ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿದೆ. ಸುರ್ಜೇವಾಲಾ ಅವರು ಪದೇ ಪದೇ ಬೆಂಗಳೂರಿಗೆ ಬರುತ್ತಿದ್ದಾರೆ. ಶಾಸಕರ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದಾರೆ. ಇವತ್ತು ಮತ್ತೆ ಬಂದಿದ್ದಾರೆ. 3 ದಿನಗಳ ಕಾಲ ಇರುತ್ತಾರೆ. ಡಿ.ಕೆ.ಶಿವಕುಮಾರ್ ಜೊತೆ 100 ಶಾಸಕರಿದ್ದಾರೆ. ಅವರಿಗೂ ಅವಕಾಶ ಕೊಡಬೇಕೆಂಬ ನಾನಾ ಹೇಳಿಕೆ ಬರುತ್ತಿದೆ. ಬಿ.ಆರ್.ಪಾಟೀಲರ ಹೇಳಿಕೆ, ರಾಜು ಕಾಗೆಯವರ ಹೇಳಿಕೆಗಳನ್ನು ಗಮನಿಸಿದರೆ ಆಡಳಿತ ಪಕ್ಷದಲ್ಲಿ ಶಾಸಕರು ಮುಖ್ಯಮಂತ್ರಿಗಳ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂಬುದು ಸ್ಪಷ್ಟ ಎಂದು ವಿಶ್ಲೇಷಿಸಿದರು.
ಸುರ್ಜೇವಾಲಾ ಭೇಟಿ ಹಿಂದೆ ನಿಗದಿತ ಕಾರ್ಯಸೂಚಿ :
ಸಿದ್ದರಾಮಯ್ಯನವರು ಮುಂದುವರೆಯುತ್ತಾರಾ? ಅವರ ಸ್ಥಾನಕ್ಕೆ ಬರುವವರು ಯಾರು? ಎಂಬುದು ಮುಖ್ಯವಲ್ಲ. ಆದರೆ, ಒಂದಂತೂ ಸತ್ಯ. ಸುರ್ಜೇವಾಲಾ ಅವರು ಸುಮ್ಮನೆ ಬರುತ್ತಿಲ್ಲ. ಒಂದು ನಿಗದಿತ ಕಾರ್ಯಸೂಚಿ ಇಟ್ಟುಕೊಂಡೇ ಕರ್ನಾಟಕಕ್ಕೆ ಪದೇಪದೇ ಬರುತ್ತಿದ್ದಾರೆ. ಅದು ಮುಖ್ಯಮಂತ್ರಿಗಳು ಮಾತ್ರವಲ್ಲದೇ ಆಡಳಿತ ಪಕ್ಷದ ಎಲ್ಲರಿಗೂ ಗೊತ್ತಿದೆ ಎಂದು ವಿಜಯೇಂದ್ರ ಅವರು ನುಡಿದರು.
ಹಾಸನ ಜಿಲ್ಲೆಯಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ. ಯುವಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಲ್ಲಿನ ಉಸ್ತುವಾರಿ ಸಚಿವರು ಕಳೆದ 3 ತಿಂಗಳುಗಳಿಂದ ಭೇಟಿ ಕೊಟ್ಟಿಲ್ಲ. ಇದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.







