ಕಾಂಗ್ರೆಸ್ ದೋಷಗಳಿಗೆ ಕನ್ನಡಿ ಹಿಡಿದ ಸಚಿವ ಕೆ.ಎನ್.ರಾಜಣ್ಣ ತಲೆದಂಡ : ವಿಜಯೇಂದ್ರ

ಬೆಂಗಳೂರು, ಆ. 11: ‘ಚುನಾವಣಾ ಆಯೋಗದ ವಿರುದ್ಧ ಬಾಲಿಶತನದ ಆರೋಪ ಮಾಡುವ ಮೂಲಕ ನಗೆ ಪಾಟಲಿಗೀಡಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದ್ಯ ಹತಾಶ ಮನಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ‘ಇದ್ದಿದ್ದು ಇದ್ದಂಗೆ ಹೇಳಿ' ಕಾಂಗ್ರೆಸ್ ದೋಷಗಳಿಗೆ ಕನ್ನಡಿ ಹಿಡಿದ ಹಿರಿಯ ಸಚಿವ ಕೆ.ಎನ್.ರಾಜಣ್ಣ ತಲೆದಂಡವಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಸಿಎಂ ಸಿದ್ದರಾಮಯ್ಯರ ಬಲಗೈ ಭಂಟರಾಗಿ ಕಾಂಗ್ರೆಸ್ ವೈಫಲ್ಯಗಳು ಹಾಗೂ ಆಂತರಿಕ ದಬ್ಬಾಳಿಕೆಗಳನ್ನು ನಿಷ್ಟೂರವಾಗಿ ಬಿಚ್ಚಿಡುತ್ತಿದ್ದ ರಾಜಣ್ಣ ಹೈಕಮಾಂಡ್ ಪಾಲಿಗೆ ಬಿಸಿ ತುಪ್ಪವಾಗಿದ್ದರು. ‘ಕೈ' ವರಿಷ್ಠ ನೇತಾರ ರಾಹುಲ್ ಗಾಂಧಿಯವರ ಎಡಬಿಡಂಗಿ ನಡೆಯನ್ನು ಎತ್ತಿ ತೋರಿಸಿದ ಶೋಷಿತ ಸಮುದಾಯಗಳ ಪರವಾಗಿ ದನಿಯಾಗಿದ್ದ ಕೆ.ಎನ್.ರಾಜಣ್ಣ ಸಚಿವ ಪದವಿಯಿಂದ ಉಚ್ಚಾಟಿತಗೊಂಡಿರುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಸಂಸ್ಕೃತಿ ಇನ್ನೂ ತೊಲಗಿಲ್ಲ ಎನ್ನುವುದನ್ನು ಸಾಕ್ಷೀಕರಿಸಿದೆ ಎಂದು ಟೀಕಿಸಿದ್ದಾರೆ.
‘ಮತಗಳ್ಳತನದ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅಪ್ರಬುದ್ಧ ನಡೆಯನ್ನು ವಿಶ್ಲೇಷಿಸಿ ಕಾಂಗ್ರೆಸ್ ಪಕ್ಷದ್ದೇ ತಪ್ಪು, ‘2024ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು, ಲೋಕಸಭಾ ಚುನಾವಣೆಗೂ ಮುಂಚೆಯೇ ಮತದಾರರ ಪಟ್ಟಿಯನ್ನು ಪರಿಶೀಲಿಸುವುದು ಕಾಂಗ್ರೆಸ್ ಪಕ್ಷದ ಜವಾಬ್ದಾರಿಯಾಗಿತ್ತು, ವೇಳೆ ಬೂತ್ ಕಾರ್ಯಕರ್ತರು ಇದನ್ನು ಗಮನಿಸುವಂತೆ ನೋಡಿಕೊಳ್ಳಬೇಕಿತ್ತು.
ಮತದಾನದಂದು ಕಾಂಗ್ರೆಸ್ ಪಕ್ಷದ ಏಜೆಂಟರುಗಳು ಲೋಪಗಳಿದ್ದರೆ ಗಮನಿಸುವಂತೆ ತರಬೇತಿ ನೀಡಬೇಕಾಗಿತ್ತು, ಚುನಾವಣೆಯ ನಂತರವೂ ದೂರು ಸಲ್ಲಿಸಬೇಕಾಗಿತ್ತು, ಇದ್ಯಾವುದನ್ನೂ ಮಾಡದೆ ಏಕಾಏಕಿ ಈಗ ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಲು ಹೊರಟಿರುವ ಕ್ರಮ ಸರಿಯಲ್ಲ’ ಎಂದು ರಾಜಣ್ಣ ಹೇಳಿದ್ದರು. ಇದನ್ನೇ ನಾಡಿನ ಪ್ರಮುಖ ಪತ್ರಿಕೆಗಳು ತಮ್ಮ ಸಂಪಾದಕೀಯದಲ್ಲೂ ಉಲ್ಲೇಖಿಸಿವೆ ಎಂದು ಹೇಳಿದ್ದಾರೆ.
‘ಈ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಕೇವಲ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಆಗಿ ಕೆಲಸ ಮಾಡುತ್ತಿದ್ದಾರೆ, ಎನ್ನುವುದು ಇತ್ತೀಚಿನ ಕರ್ನಾಟಕ ಸರಕಾರದ ನಿರ್ಧಾರಗಳನ್ನು ದಿಲ್ಲಿಯ ಹೈಕಮಾಂಡ್ ಅಂಗಳದಲ್ಲಿ ಪ್ರಕಟಿಸುತ್ತಿರುವುದು ಸ್ಪಷ್ಟವಾಗಿದೆ. ರಾಜಣ್ಣನವರು ಈ ಹಿಂದೆ ಹೇಳಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸೆಪ್ಟಂಬರ್ ಕ್ರಾಂತಿ ಮುಂಚಿತವಾಗಿಯೇ ಆರಂಭವಾಗಿದೆ, ಕ್ರಾಂತಿಯ ಕಿಡಿ ಯಾರನ್ನಾದರೂ ಬಲಿತೆಗೆದು ಕೊಳ್ಳಲಿ, ಆದರೆ ಸದ್ಯ ಈಗಾಗಲೇ ಸೊರಗಿರುವ ಕರ್ನಾಟಕವನ್ನು ಸುಡದಿರಲಿ ಎಂದು ಅವರು ತಿಳಿಸಿದ್ದಾರೆ.
‘ಸ್ವಾರ್ಥದ ಅಟ್ಟಹಾಸ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಸರಣಿ ಹಗರಣಗಳನ್ನು ಕತ್ತಿಗೆ ಸುತ್ತಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಜನರ ಹಿತವನ್ನು ಮರೆತು ಪಕ್ಷ ಹಾಗೂ ಅಧಿಕಾರದ ಸುತ್ತ ಗಮನವನ್ನು ಕೇಂದ್ರೀಕರಿಸಿ ರಾಜ್ಯ ಹಾಗೂ ರಾಜ್ಯದ ಜನರ ಹಿತಾಸಕ್ತಿಯನ್ನು ಸಂಪೂರ್ಣ ಮರೆತಿದೆ. ಕಾಂಗ್ರೆಸ್ ಅಧಿಕಾರಕ್ಕೆ ತಂದ ಕಾರಣಕ್ಕಾಗಿ ಜನ ಶಪಿಸುತ್ತಿದ್ದಾರೆ ಇದರ ನಡುವೆ ದಮನಿತ ಸಮುದಾಯದ ನಾಯಕರನ್ನೂ ರಾಜಕೀಯವಾಗಿ ಮುಗಿಸುವ ಷಡ್ಯಂತ್ರದಿಂದ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡವನ್ನು ಜನ ಮತ್ತೊಮ್ಮೆ ತಿಳಿಯುವಂತಾಗಿದೆ ಎಂದು ಅವರು ಟೀಕಿಸಿದ್ದಾರೆ.







