ತ್ಯಾಗ, ಪರಿಶ್ರಮ, ಹೋರಾಟಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ : ವಿಜಯೇಂದ್ರ

ಚಿತ್ರದುರ್ಗ : ನಾಡು ಕಂಡ ಧೀಮಂತ ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ಹೋರಾಟ ಮಾಡಲಿಲ್ಲ. ಬದಲಿಗೆ ಜನರಿಗಾಗಿ ಹೋರಾಟ ಮಾಡಿದವರು. ತ್ಯಾಗ, ಪರಿಶ್ರಮ, ಹೋರಾಟಕ್ಕೆ ಮತ್ತೊಂದು ಹೆಸರೇ ಯಡಿಯೂರಪ್ಪ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಹೇಳಿದರು.
ಅಭಿಮಾನೋತ್ಸವದಲ್ಲಿ ಮಾತನಾಡಿದ ಅವರು, ಬಿಎಸ್‍ವೈ ಅವರು, ಜನನಾಯಕರಾದವರು. ನನ್ನಂತ ಅನೇಕರಿಗೆ ಪ್ರೇರಣೆಯಾದವರು. ಇಂದು ಈ ಅಭಿಮಾನೋತ್ಸವಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಜನರು ಬಂದಿರುವುದು ನೋಡಿದರೆ ಬಿಎಸ್‍ವೈ ಅವರ ಮೇಲೆ ಎಂತಹ ಅಭಿಮಾನ ಇದೆ ಎಂಬುದು ತಿಳಿಯುತ್ತದೆ. ಇದೊಂದು ಐತಿಹಾಸಿಕ ಕ್ಷಣ. ಬಿಎಸ್‍ವೈ ಅವರ ಐವತ್ತು ವರ್ಷಗಳ ರಾಜಕೀಯ ಜೀವನಕ್ಕೆ ಗೌರವ ಸಲ್ಲಿಸುವ ಕ್ಷಣ ಎಂದು ಹೇಳಿದರು.
ಬಿಎಸ್‍ವೈ ಅವರ ಹೋರಾಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ತಮ್ಮ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಜೀವನದುದ್ದಕ್ಕೂ ಯಾವುದೇ ಸವಾಲುಗಳು ಬಂದರೂ ಬೆನ್ನು ತೋರಿಸಿ ಓಡಿ ಹೋದವರಲ್ಲ. ಯಾವುದೇ ರಾಜಕೀಯ ಷಡ್ಯಂತ್ರ, ಸವಾಲು ಬಂದರೂ ಅದನ್ನು ಧೈರ್ಯವಾಗಿ ಎದುರಿಸಿದವರು ಎಂದು ವಿವರಿಸಿದರು.
ಚುನಾಣಾ ಚಾಣಕ್ಯ ಎಂದೇ ಹೆಸರು ಪಡೆದಿರುವ ಗೃಹ ಅಮಿತ್ ಶಾ ಅವರು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಿ ಪುಣ್ಯಭೂಮಿ ಚಿತ್ರದುರ್ಗಕ್ಕೆ ಬಂದಿದ್ದಾರೆ. ಅವರಿಗೆ ನಾಡಿನ ಜನತೆಯ ಪರವಾಗಿ ಧನ್ಯವಾದಗಳು ಎಂದರು.
ಚಿತ್ರದುರ್ಗ ವೀರರ ಭೂಮಿ, ಮದಕರಿ ನಾಯಕ ಹಾಗೂ ಒನಕೆ ಓಬವ್ವನ ತ್ಯಾಗದ ಭೂಮಿ, ಅಲ್ಲದೇ ಸ್ವಾಮೀಜಿಗಳ ತಪೋಭೂಮಿ. ಇಂತಹ ನೆಲದಲ್ಲಿ ಅಭಿಮಾನೋತ್ಸವ ಆಚರಿಸಲು ನಾವು ತೀರ್ಮಾನಿಸಿದೆವು. ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಸಮಾರಂಭದಲ್ಲಿ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದಾರೆ ಎಂದರು.






