‘ಸ್ಟಿಂಗ್ ಆಪರೇಷನ್’ ಕಲಾವಿದರು ಯಾರೆಂದು ಗೊತ್ತಿದೆ: ವಿಜಯೇಂದ್ರ

ಬೆಂಗಳೂರು : ‘ಸ್ಟಿಂಗ್ ಆಪರೇಷನ್’ ಮಾಡುವ ಕಲಾವಿದರು ಯಾರೆಂದು ರಾಜ್ಯದ ಜನತೆಗೆ ಗೊತ್ತಿದೆ. ಕಾಂಗ್ರೆಸ್ ಸರಕಾರದ ಸಚಿವರೇ ಇವತ್ತು ಭಯಭೀತರಾಗಿದ್ದು, ತಮ್ಮ ಕರ್ಮಕಾಂಡವನ್ನು ಅವರ ಪಕ್ಷದವರೇ ಹೊರಕ್ಕೆ ತರುವ ಭಯ ಅವರಲ್ಲಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೌನ ತಾಳಿದ್ದಾರೆ. ಇದೆಲ್ಲದಕ್ಕೂ ಇತಿಶ್ರೀ ಹಾಡಲು ಸಮರ್ಪಕ ತನಿಖೆ ಆಗಲಿ ಎಂದು ಒತ್ತಾಯಿಸಿದರು.
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಬೇಕು. ಆದರೆ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಎಲ್ಲವನ್ನೂ ಗೌಪ್ಯವಾಗಿ ಇಡುವ ಗುಮಾನಿ ರಾಜ್ಯದ ಜನರನ್ನು ಕಾಡುತ್ತಿದೆ. ಈ ಕುರಿತು ಕೂಡಲೇ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಆತಂಕವೇಕೆ?: ಈ ಹಿಂದೆ ಸಿದ್ದರಾಮಯ್ಯ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿಹಾಕಿದ್ದರು. ಎಸಿಬಿಯನ್ನು ರಚಿಸಿ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿ ಕ್ಲೀನ್ಚಿಟ್ ಪಡೆದುದನ್ನು ನೋಡಿದ್ದೇವೆ. ಈಗಲೂ ಅದೇ ಪ್ರಯತ್ನ ನಡೆಯುತ್ತಿದೆ. ಹೈಕೋರ್ಟ್ ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಎಸ್ಐಟಿ ರಚಿಸಿತ್ತು. ಆದರೆ, ಕಾಂಗ್ರೆಸ್ ಸರಕಾರ, ಪ್ರಿಯಾಂಕ್ ಖರ್ಗೆಗೆ ಆತಂಕ ಆದುದೇಕೆ? ಎಂದು ವಿಜಯೇಂದ್ರ ಕೇಳಿದರು.
ಕೆಪಿಎಸ್ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರದ ಚರ್ಚೆ ಆಗುತ್ತಿತ್ತು. ಅದಕ್ಕೆ ಪುಷ್ಟಿ ಕೊಡುವ ಕೆಲಸವನ್ನು ಸರಕಾರವೇ ಮಾಡುತ್ತಿದೆ. ಖರ್ಗೆ, ಬಿಜೆಪಿ ಕಡೆ ಬೆಟ್ಟು ಮಾಡಿ ಆರೋಪ ಮಾಡುತ್ತಿದ್ದರು. ನಿಮಗೆ ನಿಜವಾದಲೂ ಪ್ರಾಮಾಣಿಕತೆ ಇದ್ದರೆ ಕೆಪಿಎಸ್ಸಿಯ ಹಗರಣದ ತನಿಖೆಯ ಇಚ್ಛಾಶಕ್ತಿ ಇದ್ದರೆ ಹೈಕೋರ್ಟ್ ಯಾವ ಅಧಿಕಾರಿಗಳನ್ನು ನೇಮಿಸಿದೆಯೋ ಅದೇ ಅಧಿಕಾರಿಗಳಿಂದ ತನಿಖೆ ಮಾಡಿಸಿ ಎಂದು ಆಗ್ರಹಿದರು.






