ಕಾಂಗ್ರೆಸ್ಸಿನವರ ಅಧಿಕಾರದ ಮದ ಜನ ಇಳಿಸುತ್ತಾರೆ: ವಿಜಯೇಂದ್ರ

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ಸಿನವರ ಪಾಪದ ಕೊಡ ತುಂಬಿದೆ. ನಿಮ್ಮ ಅಹಂಕಾರ, ಅಧಿಕಾರದ ಮದವನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಜನತೆ ಇಳಿಸಿದ್ದಾರೆ. ಮುಂಬರುವ ದಿನಗಳಲ್ಲಿಯೂ ರಾಜ್ಯದ ಜನತೆ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮನೆಗೆ ನೂರಾರು ಚೂರಿಗಳು ಮತ್ತು ಚಾಕುಗಳನ್ನು ಕಳುಹಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುವ ಕೆಲಸ ಅವರು ಮಾಡಿದ್ದಾರೆ. ಗೂಂಡಾ ಸರಕಾರ ಎನ್ನುವುದನ್ನು ದೇಶದ ಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಕೊತ್ವಾಲ್ ಗುಣ: ಕೊತ್ವಾಲ್ ರಾಮಚಂದ್ರ ಇಲ್ಲ. ಆದರೆ ಕೊತ್ವಾಲ್ ರಾಮಚಂದ್ರ ಜೊತೆಯಲ್ಲಿ ಗೂಂಡಾಗಿರಿ ಮಾಡಿಕೊಂಡು ಬಂದಂತವರು ಕಾಂಗ್ರೆಸ್ ಪಕ್ಷದ ವ್ಯವಸ್ಥೆಯಲ್ಲೂ ಇದ್ದಾರೆ. ಹುಟ್ಟುಗುಣ ಸುಟ್ಟರೂ ಹೋಗಲ್ಲ ಅನ್ನುವಂತೆ ಇವರ ವರ್ತನೆ ಇದೆ. ಸರಕಾರ ಹತಾಶ ಸ್ಥಿತಿಯಲ್ಲಿದೆ. ಇವರ ವರ್ತನೆಯನ್ನು ಯಾರೂ ಕ್ಷಮಿಸುವುದಕ್ಕೆ ಸಾಧ್ಯ ಇಲ್ಲ ಎಂದು ತಿಳಿಸಿದರು.
ಹತಾಶೆ ಯಾಕೆ?: ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ‘ಹಳ್ಳಿ ಗುಗ್ಗು’ ಎನ್ನುತ್ತಾರೆ. ಗೃಹ ಸಚಿವರಾಗಿ ಮಾತಾಡುವ ಮಾತೇ ಇದು. ಕಾಂಗ್ರೆಸ್ಸಿನವರು ಚುನಾಯಿತ ಪ್ರಧಾನಿ ಮೋದಿಯವರ ಕುರಿತು ಹಗುರ ಮಾತನಾಡುತ್ತಾರೆ. ಅವರ ತಂದೆ-ತಾಯಿಯನ್ನೂ ಟೀಕಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಬಿಹಾರದಲ್ಲಿ ಮೋದಿ ಅವರ ತಂದೆ ಬಗ್ಗೆ ಟೀಕೆ ಮಾಡಿದ್ದು, ಕಾಂಗ್ರೆಸಿಗರು ಹತಾಶೆರಾಗಿದ್ದಾರೆ ಎಂದು ಟೀಕಿಸಿದರು.
ಒಗ್ಗೂಡಿ ನಡೆಯುತ್ತೇವೆ: ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕು ಎಂದು ಎಲ್ಲ ಹಿರಿಯರ ಅಪೇಕ್ಷೆಯೂ ಇದೆ. ಆ ನಿಟ್ಟಿನಲ್ಲಿ ನಾವು ಮುಂದೆ ಹೋಗುತ್ತೇವೆ. ಲಂಚ ಇಲ್ಲದೇ ಈ ಕಾಂಗ್ರೆಸ್ ಸರಕಾರದಲ್ಲಿ ಏನೂ ನಡೆಯುತ್ತಿಲ್ಲ. ಇದರ ಕುರಿತು ಉಭಯ ಸದನದಲ್ಲಿ ಮಾತನಾಡುತ್ತೇವೆ ಎಂದು ಹೇಳಿದರು.






