ಕಾಲ್ತುಳಿತ ಪ್ರಕರಣ | ಭಾರೀ ಜನಸಂದಣಿಯನ್ನು ನಿರೀಕ್ಷಿಸಿರಲಿಲ್ಲ ಎನ್ನುವ ಮೂಲಕ ಯಾರನ್ನು ಮೂರ್ಖರನ್ನಾಗಿಸುತ್ತಿದ್ದೀರಿ?: ಡಿಕೆಶಿ ವಿರುದ್ಧ ವಿಜಯೇಂದ್ರ ಆಕ್ರೋಶ

ಬಿ.ವೈ.ವಿಜಯೇಂದ್ರ
ಬೆಂಗಳೂರು : "ಕ್ರೀಡೆಗಿಂತ ರಾಜಕಾರಣ ಹೆಚ್ಚಾದಾಗ ದುರಂತಗಳನ್ನು ತಪ್ಪಿಸಲು ಸಾಧ್ಯವಿಲ್ಲ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದ ಹಿನ್ನೆಲೆಯಲ್ಲಿ ನಿನ್ನೆ (ಬುಧವಾರ) ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, "ಕ್ರೀಡೆಗಿಂತ ರಾಜಕಾರಣ, ಅಭಿಮಾನಿಗಳಿಗಿಂತ ನಿಮ್ಮ ಕುಟುಂಬದವರ ಸೆಲ್ಫಿಗಳು, ಸುರಕ್ಷತೆಗಿಂತ ಆಡಂಬರ ಹಾಗೂ ಆಡಳಿತಕ್ಕಿಂತ ಪ್ರಚಾರವೇ ಹೆಚ್ಚು ಮುಖ್ಯವಾದಾಗ ದುರಂತಗಳು ಅನಿವಾರ್ಯವಾಗುತ್ತವೆ. ನಾವು ಭಾರೀ ಜನಸಂದಣಿಯನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳುವ ಮೂಲಕ ನೀವು ಯಾರನ್ನು ಮೂರ್ಖರನ್ನಾಗಿಸುತ್ತಿದ್ದೀರಿ?" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
"ಅಭಿಮಾನಿಗಳ ನಿರೀಕ್ಷೆ ಹಾಗೂ ಭಾವೋದ್ವೇಗಗಳ ಹಿನ್ನೆಲೆಯಲ್ಲಿ ಮಗೂ ಕೂಡಾ ಭಾರಿ ಜನಸಂದಣಿ ಸೇರಲಿದೆ ಎಂದು ಮುನ್ನಂದಾಜು ಮಾಡುತ್ತಿತ್ತು" ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.
"ವಿಧಾನ ಸೌಧದ ಪವಿತ್ರ ಮೆಟ್ಟಿಲುಗಳ ಮೇಲೆಯೇ ಮುಗ್ಧ ನಾಗರಿಕರ ಸುರಕ್ಷತೆ ಹಾಗೂ ಯೋಗಕ್ಷೇಮದ ಬದಲು, ಪ್ರಚಾರದ ಸ್ಟಂಟ್ ಆಯ್ದುಕೊಂಡ ನಿಮ್ಮ ಸರಕಾರದ ಕರ್ತವ್ಯ ವಿಮುಖತೆಗಿಂತ ಇದು ಕಡಿಮೆ ಇಲ್ಲ ಎಂದು ಅವರು ಹರಿಹಾಯ್ದಿದ್ದಾರೆ.
"50 ದಿನಗಳ ಕಾಲ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶವಾಗಿದ್ದ ಮಹಾಕುಂಭ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಉತ್ತರ ಪ್ರದೇಶ ಸರಕಾರದಿಂದ ನಿಮ್ಮ ಸರಕಾರ ಪಾಠ ಕಲಿಯಬೇಕಿದೆ" ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.







