‘ನಿಯೋಜನೆ ಮೇಲಿರುವ’ ಗ್ರಾಮ ಆಡಳಿತ ಅಧಿಕಾರಿಗಳ ಬಿಡುಗಡೆಗೆ ಸೂಚನೆ

ಬೆಂಗಳೂರು : ಪ್ರಾದೇಶಿಕ ಆಯುಕ್ತರ/ಜಿಲ್ಲಾಧಿಕಾರಿಗಳ/ಉಪವಿಭಾಗಾಧಿಕಾರಿ/ತಹಶಿಲ್ದಾರ್ ಕಚೇರಿಗಳಲ್ಲಿ ನಿಯೋಜನೆ/ಅನ್ನ ಕರ್ತವ್ಯದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೂಡಲೇ ಅವರ ಮೂಲಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಬಿಡುಗಡೆ ಮಾಡಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದಶಿ ರಾಜೇಂದರ್ ಕುಮಾರ್ ಕಟಾರಿಯಾ ಸೂಚನೆ ನೀಡಿದ್ದಾರೆ.
ಮಂಗಳವಾರ ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳನ್ನು ಮೂಲ ಹುದ್ದೆಯಲ್ಲಿಯೇ ಕರ್ತವ್ಯಕ್ಕೆ ನಿಯೋಜಿಸುವಂತೆ ಹಲವು ಬಾರಿ ಸೂಚನೆಗಳನ್ನು ನೀಡಲಾಗಿದ್ದರೂ, ಆ ಅಧಿಕಾರಿಗಳು ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸದೇ ಅನ್ಯ ಕರ್ತವ್ಯದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.
ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಕಾರ್ಯ ಸ್ವರೂಪವನ್ನು ಸರಳೀಕರಣಗೊಳಿಸಿ ಡಿಜಿಟಲೀಕರಣ ಮಾಡುವ ಸಂಬಂಧ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳ ಕೊರತೆಯಿಂದ ಸಿಬ್ಬಂದಿಗಳ ಮೇಲೆ ಕಾರ್ಯದೊತ್ತಡ ಉಂಟಾಗುತ್ತಿರುತ್ತದೆ.
ಹೀಗಾಗಿ, ನಿಯೋಜನೆ ಮೇಲೆ ತೆರಳಿರುವ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೂಡಲೇ ಮೂಲ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಬಿಡುಗಡೆ ಮಾಡಬೇಕು. ಒಂದು ವೇಳೆ ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







