ಕಳಸ: ಅನಾರೋಗ್ಯ ಪೀಡಿತ ವೃದ್ಧೆಯನ್ನು ಜೋಳಿಗೆಯಲ್ಲಿ ಕಟ್ಟಿ ಸಾಗಿಸಿದ ಗ್ರಾಮಸ್ಥರು!
ಕುದುರೆಮುಖ ಸಮೀಪದ ಈಚಲುಹೊಳೆ ಗ್ರಾಮಕ್ಕೆ ಮರೀಚಿಕೆಯಾದ ರಸ್ತೆ ಸೌಲಭ್ಯ

ಚಿಕ್ಕಮಗಳೂರು, ಜು.12: ಗಿರಿಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಕಳಸ ತಾಲೂಕಿನ ಈಚಲುಹೊಳೆ ಗ್ರಾಮದ ಜನರು ಸೂಕ್ತ ರಸ್ತೆ ಸೌಲಭ್ಯ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅತೀಮುಖ್ಯವಾಗಿ ರಸ್ತೆ ಸೌಲಭ್ಯ ಮರೀಚಿಕೆಯಾಗಿರುವ ಈ ಗ್ರಾಮದಲ್ಲಿ ಅನಾರೋಗ್ಯ ಪೀಡಿತರನ್ನು ಜೋಳಿಗೆಯಲ್ಲಿ ಕಟ್ಟಿ ಸಾಗಿಸುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಕಳಸ ತಾಲೂಕು ಎಸ್‌ಸಿ, ಎಸ್‌ಟಿ ಸಮುದಾಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿಂದುಳಿದ ತಾಲೂಕಾಗಿದೆ. ಕಳಸ ತಾಲೂಕು ಪ್ರವಾಸಿತಾಣವಾಗಿದ್ದರೂ ನೂರಾರು ಕುಗ್ರಾಮಗಳ ಕಾಲನಿಗಳಿಗೆ ಇಂದಿಗೂ ಮೂಲಸೌಕರ್ಯ ಮರೀಚಿಕೆಯಾಗಿದೆ. ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಈಚಲಹೊಳೆ ಎಂಬ ಕುಗ್ರಾಮದಲ್ಲಿ ಸುಮಾರು 25 ಗಿರಿಜನ ಕುಟುಂಬಗಳು ಅನಾದಿಕಾಲದಿಂದಲೂ ವಾಸಿಸುತ್ತಿವೆ. ತಾಲೂಕು ಕೇಂದ್ರವಾಗಿರುವ ಕಳಸ ಪಟ್ಟಣದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಇಂದಿಗೂ ಸಮರ್ಪಕವಾದ ರಸ್ತೆ ಸೌಲಭ್ಯ ಇಲ್ಲ. ಸರಕಾರಿ ಕಚೇರಿಗಳ ಕೆಲಸ, ಶಿಕ್ಷಣ, ಆಸ್ಪತ್ರೆ ಎಲ್ಲದಕ್ಕೂ ಕಳಸ ಪಟ್ಟಣವನ್ನೇ ಅವಲಂಬಿಸಿರುವ ಈ ಕುಗ್ರಾಮದ ಜನರು ಹಾಗೂ ಶಾಲಾ, ಕಾಲೇಜುಗಳ ವಕ್ಕಳು ರಸ್ತೆ ಸೌಲಭ್ಯದ ಅವ್ಯವಸ್ಥೆಯಿಂದಾಗಿ ಅಗತ್ಯ ಕೆಲಸಗಳಿಗಾಗಿ ಇಂದಿಗೂ ಕಾಡು ದಾರಿಯಲ್ಲಿ, ನದಿ, ಹಳ್ಳಕೊಳ್ಳಗಳನ್ನು ದಾಟಿಕೊಂಡು ನಡೆದೇ ಕಳಸ ಪಟ್ಟಣ ಇಲ್ಲವೇ, ಸಮೀಪದ ಸಂಸೆ ಗ್ರಾಮಕ್ಕೆ ಬರಬೇಕಾಗಿದೆ.
ಬುಧವಾರ ಬೆಳಗ್ಗೆ ಗ್ರಾಮದಲ್ಲಿ ಶೇಷಮ್ಮ ಎಂಬ 70 ವರ್ಷದ ವೃದ್ಧೆ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಗ್ರಾಮಸ್ಥರು ವೃದ್ಧೆಯನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಕಾಡು ದಾರಿಯಲ್ಲಿ ನಡೆದು ಬಂದು ಕಳಸ ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ವೃದ್ಧೆಯನ್ನು ಜೋಳಿಗೆಯಲ್ಲಿ ಕಟ್ಟಿ ಹೊತ್ತು ತಂದ ದೃಶ್ಯಗಳ ವೀಡಿಯೊ ವೈರಲ್ ಆಗಿದೆ.
ಈಚಲುಹೊಳೆ ಗ್ರಾಮ ತಲುಪಲು ಸಂಸೆ ಗ್ರಾಮದಿಂದ ಸುಮಾರು 6 ಕಿ.ಮೀ. ದೂರದ ಕಚ್ಛಾ ರಸ್ತೆ ಇದೆಯಾದರೂ ಈ ರಸ್ತೆ ಮಳೆಗಾಲದಲ್ಲಿ ಕೆಸರುಗುಂಡಿಯಾಗುವುದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ಹರಸಾಹಸ ಪಡವೇಕಿದೆ. ರಸ್ತೆ ಕೆಸರು ಗುಂಡಿಯಾಗುವ ಕಾರಣಕ್ಕೆ ಬಾಡಿಗೆ ವಾಹನಗಳು ಈ ರಸ್ತೆಗಿಳಿಯಲು ಹಿಂಜರಿಯುತ್ತಿವೆ. ಈ ರಸ್ತೆ ಮೂಲಕ ಸಾಗಿದ ಬಳಿಕ ಈಚಲುಹೊಳೆ ಗ್ರಾಮ ತಲುಪಲು ಸುಮಾರು 4 ಕಿ.ಮೀ. ಕಾಡು ಹಾಗೂ ಕಾಫಿ ತೋಟಗಳ ಮಧ್ಯೆ ಇರುವ ಕಾಲು ದಾರಿಯನ್ನೇ ಅವಲಂಬಿಸಬೇಕಿದೆ. ಇಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲದ ಕಾರಣಕ್ಕೆ ನಿವಾಸಿಗಳಿಗೆ 4ಕಿ.ಮೀ. ನಡೆಯುವುದು ಅನಿವಾರ್ಯವಾಗಿದ್ದು, ಅನಾರೋಗ್ಯ ಪೀಡಿತರನ್ನು ಜೋಳಿಗೆಯಲ್ಲಿ ಕಟ್ಟಿ ಹೊತ್ತು ತರುವುದಲ್ಲದೇ ಬೇರೆ ಮಾರ್ಗವೇ ಇಲ್ಲದಂತಾಗಿದೆ.
ಈಚಲುಹೊಳೆ ಗ್ರಾಮ ಸಂಪರ್ಕಕ್ಕೆ ಸುಸಜ್ಜಿತ ರಸ್ತೆ ಮಾಡಿಕೊಡಿ ಎಂದು ಇಲ್ಲಿನ ನಿವಾಸಿಗಳು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನೂರಾರು ಬಾರಿ ಮನವಿ ಮಾಡಿದ್ದರೂ ಅವರಿಂದ ಕೇವಲ ಭರವಸೆ ಸಿಗುತ್ತಿದೆಯೇ ಹೊರತು ಗ್ರಾಮಕ್ಕೆ ರಸ್ತೆ ಸೌಲಭ್ಯ ಮಾತ್ರ ಸಿಕ್ಕಿಲ್ಲ. ರಸ್ತೆ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮುಂದಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿ ಮಾಡುತ್ತಾರೆ. ಈ ಗ್ರಾಮ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುತ್ತದೆ ಎಂಬ ನೆಪವೊಡ್ಡಿ ಗ್ರಾಮಕ್ಕೆ ರಸ್ತೆ ಮಾಡಲು ಅಡ್ಡಿ ಮಾಡುತ್ತಿದ್ದಾರೆಂದು ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
''ನಾವು ಅನಾದಿಕಾಲದಿಂದಲೂ ಇಲ್ಲಿ ವಾಸವಾಗಿದ್ದೇವೆ. ನಮ್ಮ ಗ್ರಾಮ ಸಂಪರ್ಕಕ್ಕೆ ರಸ್ತೆ ಸೌಲಭ್ಯ ಇಲ್ಲ. ಈಚಲುಹೊಳೆ ಗ್ರಾಮದಿಂದ ಹೆಬ್ಬನಗದ್ದೆ ಗ್ರಾಮದವರೆಗೆ ಸುಮಾರು 4 ಕಿಮೀ ನಡೆದುಕೊಂಡು ಹೋಗಬೇಕಿದೆ. ಅಲ್ಲಿಂದ ಕಚ್ಛಾ ರಸ್ತೆಯಲ್ಲಿ ಕಳಸ, ಸಂಸೆ ಗ್ರಾಮ ತಲುಪಬೇಕು. ಗ್ರಾಮದ ನಿವಾಸಿಗಳು ಸುಮಾರು 4 ಕಿ.ಮೀ. ದೂರ ಕಾಡುಮೇಡಿನ ದಾರಿಯಲ್ಲೇ ಅನಾದಿಕಾಲದಿಂದಲೂ ನಡೆದಾಡುತ್ತಿದ್ದೇವೆ. ಗ್ರಾಮಸ್ಥರು ಅನಾರೋಗ್ಯ ಪೀಡಿತರಾಗುವ ತುರ್ತು ಸಂದರ್ಭಗಳಲ್ಲಿ ಅವರನ್ನು ಜೋಳಿಗೆಯಲ್ಲಿ ಕಟ್ಟಿ ಸಾಗಿಸುವುದು ನಮಗೆ ಅನಿವಾರ್ಯವಾಗಿದೆ. ಮಳೆಗಾಲದಲ್ಲಿ ನಮ್ಮ ಕಷ್ಟ ದೇವರಿಗೆ ಮಾತ್ರ ಗೊತ್ತು. ಈ ಕಷ್ಟದ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಅವರಿಂದ ಭರವಸೆ ಬಿಟ್ಟು ಮತ್ತೇನೂ ಸಿಕ್ಕಿಲ್ಲ. ಗ್ರಾಮ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಹಿಂದಿನ ಶಾಸಕರೂ ಸೇರಿದಂತೆ ಜಿಲ್ಲಾಧಿಕಾರಿಗೂ ಮನವಿ ಮಾಡಿದ್ದೇವೆ. ಆದರೂ ರಸ್ತೆ ಸೌಲಭ್ಯ ಮಾತ್ರ ಸಿಕ್ಕಿಲ್ಲ. ಹಾಲಿ ಶಾಸಕಿ ನಯನಾ ಮೋಟಮ್ಮ ಅವರಾದರೂ ನಮ್ಮ ಸಮಸ್ಯೆಗೆ ಸಂದಿಸಬೇಕು''
- ರಮೇಶ್, ಗ್ರಾಮದ ನಿವಾಸಿ
-----------------------------------------------------------------------
''ರಸ್ತೆ ಇಲ್ಲದ ಕಾರಣಕ್ಕೆ ಅನಾರೋಗ್ಯ ಪೀಡಿತರನ್ನು ಹೆಣದಂತೆ ಜೋಳಿಗೆಯಲ್ಲಿ ಕಟ್ಟಿ ಹೊತ್ತುಕೊಂಡು ಹೋಗಬೇಕಿದೆ. ಬುಧವಾರ ಶೇಷಮ್ಮ ಎಂಬವರನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ. ಕಳೆದ ವರ್ಷವೂ ಅನಾರೋಗ್ಯಕ್ಕೆ ತುತ್ತಾದವರನ್ನು ಇದೇ ಮಾದರಿಯಲ್ಲಿ ಜೋಳಿಗೆಯಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಸಾಗಿಸಲಾಗಿದೆ. ಆಗ ಜನಪ್ರತಿನಿಧಿಗಳಿಂದ ರಸ್ತೆ ಸೌಲಭ್ಯ ನೀಡುವ ಭರವಸೆ ಸಿಕ್ಕಿತ್ತು. ಆದರೆ, ಇದುವರೆಗೂ ನಮ್ಮ ಗ್ರಾಮಕ್ಕೆ ರಸ್ತೆ ಸೌಲಭ್ಯ ಸಿಕ್ಕಿಲ್ಲ''
- ರಮ್ಯಾ, ಗ್ರಾಮದ ಯುವತಿ







