Karnataka SIR | VIPಗಳಿಗೆ ಮನೆಬಾಗಿಲಲ್ಲೇ ಸೇವೆ; ಸಾಮಾನ್ಯ ಜನರು ಸರತಿ ಸಾಲಿನಲ್ಲಿಯೇ ನಿಲ್ಲಬೇಕು!

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾಮಾನ್ಯ ಮತದಾರರು ವಿಚಾರಣಾ ಕೇಂದ್ರಗಳಿಗೆ ತೆರಳಿ ಸರತಿ ಸಾಲಿನಲ್ಲಿ ಕಾಯಬೇಕಾದರೆ, VIP ಮತದಾರರ ವಿವರಗಳನ್ನು ಪರಿಶೀಲಿಸಲು ಚುನಾವಣಾ ಅಧಿಕಾರಿಗಳೇ ಅವರ ಮನೆಗೆ ತೆರಳುತ್ತಿರುವುದು ಚರ್ಚೆಗೆ ಕಾರಣವಾಗಿದೆ ಎಂದು thenewsminute.com ವರದಿ ಮಾಡಿದೆ.
ನಟ ಶಿವರಾಜ್ಕುಮಾರ್ ಅವರ ದಾಖಲೆಯನ್ನು ‘ನೋ ಮ್ಯಾಪಿಂಗ್’ (2002ರ ಚುನಾವಣಾ ಪಟ್ಟಿಯ ವಿವರಗಳೊಂದಿಗೆ ಹೊಂದಾಣಿಕೆಯಾಗದಿರುವುದು) ಎಂದು ಗುರುತಿಸಲಾಗಿತ್ತು. ಆದರೆ, ಅವರು VIP ಮತದಾರರಾಗಿರುವ ಕಾರಣ ಅವರಿಗೆ ನೋಟಿಸ್ ನೀಡಲಿಲ್ಲ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಶುಕ್ರವಾರ (ಸೆ.11) ತಿಳಿಸಿದ್ದಾರೆ.
ಶಿವರಾಜ್ಕುಮಾರ್ ಅವರು ಬೆಂಗಳೂರಿನ 152–ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ. SIRಗಾಗಿ ಸಲ್ಲಿಸಿದ ಎನ್ಯುಮರೇಷನ್ ಫಾರ್ಮ್ ನಲ್ಲಿ 2002ರ ಚುನಾವಣಾ ಪಟ್ಟಿಯ ವಿವರಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಅವರ ದಾಖಲೆಯನ್ನು ‘ನೋ ಮ್ಯಾಪಿಂಗ್’ ವರ್ಗದಲ್ಲಿ ಗುರುತಿಸಲಾಗಿತ್ತು.
‘ಅವರು VIP ಮತದಾರರಾಗಿರುವ ಕಾರಣ ಯಾವುದೇ ನೋಟಿಸ್ ನೀಡಲಾಗಿಲ್ಲ’ ಎಂದು ಅನ್ಬುಕುಮಾರ್ ಹೇಳಿದ್ದಾರೆ.
ಸೂಚನೆ ಸಿದ್ಧವಾದ ಬಳಿಕ ಅಧಿಕಾರಿಗಳು ಶಿವರಾಜ್ ಕುಮಾರ್ ಅವರನ್ನು ಸಂಪರ್ಕಿಸಿದರು. ಅವರು ತಮ್ಮ ಪಾಸ್ ಪೋರ್ಟ್ ನ ಪ್ರತಿಯನ್ನು ಸಲ್ಲಿಸಿದರು. ಅದರಲ್ಲಿ ಅವರ ಹೆಸರು ‘ಮುತ್ತುರಾಜ್ ಅವರ ಪುತ್ರ ಶಿವಪುಟ್ಟಸ್ವಾಮಿ’ ಎಂದು ನಮೂದಾಗಿತ್ತು. ಅದೇ ಹೆಸರನ್ನು ಚುನಾವಣಾ ಪಟ್ಟಿಯಲ್ಲಿ ದಾಖಲಿಸುವಂತೆ ಅವರು ಮನವಿ ಮಾಡಿದರು.
ಬಳಿಕ ಅವರ ವಿವರಗಳನ್ನು ಪರಿಶೀಲಿಸಲು ಚುನಾವಣಾ ಅಧಿಕಾರಿಗಳ ತಂಡವು ಬೆಂಗಳೂರಿನ ಮನ್ಯತಾ ಟೆಕ್ ಪಾರ್ಕ್ ಹಿಂಭಾಗದಲ್ಲಿರುವ ಅವರ ನಿವಾಸಕ್ಕೆ ತೆರಳಿತು. ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ, ಬೆಂಗಳೂರು ಉತ್ತರ ನಗರ ಪಾಲಿಕೆಯ ಜಂಟಿ ಆಯುಕ್ತರು, ಬ್ಯಾಟರಾಯನಪುರ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ (ERO), ಸಹಾಯಕ ಚುನಾವಣಾ ನೋಂದಣಾಧಿಕಾರಿ (AERO) ಹಾಗೂ BLO ಮೇಲ್ವಿಚಾರಕರು ತಂಡದಲ್ಲಿದ್ದರು.
ಅಂತಿಮ ಚುನಾವಣಾ ಪಟ್ಟಿ ಪ್ರಕಟವಾದ ಬಳಿಕ ‘ಫಾರ್ಮ್ 8’ ಮೂಲಕ ಶಿವರಾಜ್ಕುಮಾರ್ ಅವರ ಹೆಸರನ್ನು ನವೀಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣ್ಯರ ದಾಖಲೆಗಳಿಗೂ ‘ನೋ ಮ್ಯಾಪಿಂಗ್’
SIR ಸಂದರ್ಭದಲ್ಲಿ ಇನ್ಫೋಸಿಸ್ ಸಹ–ಸಂಸ್ಥಾಪಕ ನಂದನ್ ನಿಲೇಕಣಿ, ಭಾರತ ರತ್ನ ಪುರಸ್ಕೃತ ಸಿ.ಎನ್.ಆರ್. ರಾವ್, ಝಿರೋಧಾ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಹಾಗೂ ಅವರ ತಾಯಿ ರೇವತಿ ಕಾಮತ್ ಸೇರಿದಂತೆ ಬೆಂಗಳೂರಿನ ಹಲವು ಗಣ್ಯರ ವಿವರಗಳನ್ನು ಚುನಾವಣಾ ಆಯೋಗ ಗುರುತಿಸಿತ್ತು. ಈ ಪ್ರಕರಣಗಳು SIR ವೇಳೆ VIP ಹಾಗೂ ಸಾಮಾನ್ಯ ಮತದಾರರು ಎದುರಿಸುತ್ತಿರುವ ಪ್ರಕ್ರಿಯೆಯಲ್ಲಿನ ವ್ಯತ್ಯಾಸವನ್ನು ಮುನ್ನೆಲೆಗೆ ತಂದಿವೆ.
ಸಾಮಾನ್ಯ ಮತದಾರರಿಗೆ ಹಲವು ಸುತ್ತಿನ ಅಲೆದಾಟ
ಗಣ್ಯ ನಾಗರಿಕರ ಅನುಕೂಲಕ್ಕಾಗಿ ಅವರ ಮನೆಗಳಲ್ಲೇ ವಿಚಾರಣೆ ನಡೆಸಲಾಗುತ್ತಿದ್ದರೆ, ಸಾಮಾನ್ಯ ಮತದಾರರು ವಿಚಾರಣಾ ಕೇಂದ್ರಗಳಿಗೆ ತೆರಳಿ ಖುದ್ದಾಗಿ ಹಾಜರಾಗಬೇಕಾಗಿತ್ತು.
ಹಲವು ವಿಚಾರಣಾ ಕೇಂದ್ರಗಳಲ್ಲಿ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಮೊದಲು ERO ಅವರನ್ನು ಭೇಟಿಯಾಗಲು, ನಂತರ ನೋಟಿಸ್ಗಳನ್ನು ಸ್ಕ್ಯಾನ್ ಮಾಡಿಸಲು ಮತ್ತು ದಾಖಲೆಗಳ ಪರಿಶೀಲನೆಗೆ ಗಂಟೆಗಟ್ಟಲೆ ಕಾಯಬೇಕಾಗಿತ್ತು.
ಯಾವ ದಾಖಲೆಗಳನ್ನು ಸಲ್ಲಿಸಬೇಕು, ಮೂಲ ದಾಖಲೆ ಬೇಕೇ ಅಥವಾ ಪ್ರತಿಗಳನ್ನು ಸಲ್ಲಿಸಿದರೆ ಸಾಕೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಕೆಲವು ಮತದಾರರು ತಿಳಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಅಧಿಕಾರಿಗಳು ಹೆಚ್ಚುವರಿ ದಾಖಲೆಗಳನ್ನು ಕೇಳಿದಾಗ ಹಲವು ಮತದಾರರು ಪದೇಪದೇ ವಿಚಾರಣಾ ಕೇಂದ್ರಗಳಿಗೆ ತೆರಳಬೇಕಾಯಿತು. ಸಲ್ಲಿಸಿದ ದಾಖಲೆಗಳು ಅಪೂರ್ಣವೆಂದು ಪರಿಗಣಿಸಿದ ಸಂದರ್ಭಗಳಲ್ಲಿ ವಿಚಾರಣೆಯ ದಿನಾಂಕವನ್ನೂ ಮುಂದೂಡಬೇಕಾಯಿತು.
ಇಲ್ಲಿಯವರೆಗೆ ನೋಟಿಸ್ ಪಡೆದ ಮತದಾರರು ಖುದ್ದಾಗಿ ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ಇದರಿಂದ ವಯೋವೃದ್ಧರು, ಅನಾರೋಗ್ಯಪೀಡಿತರು, ಪ್ರಯಾಣಿಸಲು ಸಾಧ್ಯವಾಗದವರು, ಕೆಲಸದ ಕಾರಣ ನಿಗದಿತ ಸಮಯಕ್ಕೆ ಬರಲಾಗದವರು ಹಾಗೂ ವಿದೇಶದಲ್ಲಿ ವಾಸಿಸುವವರಿಗೆ ತೊಂದರೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ, VIP ಮತದಾರರಿಗೆ ಅಧಿಕಾರಿಗಳೇ ಮನೆಗೆ ತೆರಳಿ ಪರಿಶೀಲನೆ ನಡೆಸುವ ಸೌಲಭ್ಯ ಕಲ್ಪಿಸಲಾಗಿದ್ದು, ಹೆಚ್ಚು ಪ್ರಯಾಣದ ತೊಂದರೆ ಅನುಭವಿಸುವ ಸಾಮಾನ್ಯ ಮತದಾರರು ಜನಸಂದಣಿಯ ವಿಚಾರಣಾ ಕೇಂದ್ರಗಳಲ್ಲಿ ದೀರ್ಘಕಾಲ ಕಾಯಬೇಕಾಗಿರುವುದು ಟೀಕೆಗೆ ಕಾರಣವಾಗಿದೆ.
ಕುಟುಂಬದ ವಯಸ್ಕ ಸದಸ್ಯರಿಗೆ ಅವಕಾಶ
ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸೆ.11ರಂದು ಆದೇಶ ಹೊರಡಿಸಿದೆ.
ಇದರಂತೆ, ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು, ವಿದೇಶದಲ್ಲಿರುವ ಮತದಾರರು ಅಥವಾ ವಿಶೇಷಚೇತನರ ಪರವಾಗಿ ಅವರ ಕುಟುಂಬದ ವಯಸ್ಕ ಸದಸ್ಯರೊಬ್ಬರು ERO ಅಥವಾ AERO ಮುಂದೆ ಹಾಜರಾಗಿ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಸಲ್ಲಿಸಬಹುದು.
ಹೀಗಾಗಿ ಈ ವರ್ಗದ ಮತದಾರರು ಇನ್ನು ಮುಂದೆ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕಿಲ್ಲ. ಆದರೆ, ಆದೇಶ ಹೊರಬರುವ ಮುನ್ನವೇ ವಯಸ್ಸಾದ ಹಾಗೂ ದುರ್ಬಲ ವರ್ಗದ ಹಲವು ಮತದಾರರು ಹಲವು ದಿನ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದರು.
ಸೆ.11ರ ಸುತ್ತೋಲಿನ ಪ್ರಕಾರ, ಮತದಾರರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ERO ಅಥವಾ AERO ಮುಂದೆ ಹಾಜರಾಗಿ ನೋಟಿಸ್ ಗೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಸಲ್ಲಿಸಬಹುದು. ಇದಲ್ಲದೆ, ರಾಜಕೀಯ ಪಕ್ಷಗಳೊಂದಿಗೆ ನಡೆಯುವ ಸಾಪ್ತಾಹಿಕ ಸಭೆಗಳಲ್ಲಿ ನೋಟಿಸ್ ನೀಡುವ ಹಾಗೂ ಅವುಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ವಿವರಿಸುವಂತೆ EROಗಳು ಮತ್ತು AEROಗಳಿಗೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಸೂಚಿಸಿದೆ.
SIRನ ಮೂರನೇ ಹಂತ
SIRನ ಮೂರನೇ ಹಂತದಲ್ಲಿ ಸೇರ್ಪಡೆಯಾಗಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕವೂ ಒಂದಾಗಿದೆ. ಈ ಪ್ರಕ್ರಿಯೆಯನ್ನು ಮೊದಲಿಗೆ ಬಿಹಾರದಲ್ಲಿ ಕೈಗೊಳ್ಳಲಾಗಿತ್ತು. ಬಳಿಕ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ವಿಸ್ತರಿಸಲಾಯಿತು. SIR ಪ್ರಕ್ರಿಯೆಯಿಂದ ನಿಜವಾದ ಮತದಾರರ ಹೆಸರುಗಳು ಚುನಾವಣಾ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಆದರೆ, ಒಬ್ಬ ವ್ಯಕ್ತಿ ಭಾರತೀಯ ಪ್ರಜೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು SIR ಮೂಲಕ ಚುನಾವಣಾ ಆಯೋಗಕ್ಕೆ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜತೆಗೆ, SIR ಪ್ರಕ್ರಿಯೆಯ ಸಿಂಧುತ್ವವನ್ನೂ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಕೃಪೆ: thenewsminute.com






