ಡಿ.ಕೆ.ಶಿವಕುಮಾರ್ಗೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ : ಒಕ್ಕಲಿಗರ ಸಂಘ

ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ಮಾಡಿಕೊಡಬೇಕು. ಈ ವಿಚಾರದಲ್ಲಿ ಅನ್ಯಾಯವಾದರೆ ನಾವು ಸಹಿಸುವುದಿಲ್ಲ’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಅವರು ಶ್ರಮ ಸಾಕಷ್ಟಿದ್ದು, ಅದನ್ನು ಪಕ್ಷದ ವರಿಷ್ಟರು ಪರಿಗಣಿಸಬೇಕು. ಪಕ್ಷಕ್ಕಾಗಿ ಅವರು ಮಾಡಿರುವ ಕೆಲಸಕ್ಕೆ ಕೂಲಿ ಕೊಡಬೇಕು. ಒಂದು ವೇಳೆ ಶಿವಕುಮಾರ್ಗೆ ಸಿಎಂ ಸ್ಥಾನ ಸಿಗದಿದ್ದರೆ, ನಮ್ಮ ಸಮುದಾಯದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯದಲ್ಲಿ ಸಿಎಂ ಪ್ರಬಲ ಆಕಾಂಕ್ಷಿಯಾಗಿ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಐದು ವರ್ಷ ಸಿಎಂ ಆಗಿದ್ದರು. ಇದೀಗ ಎರಡೂವರೆ ವರ್ಷ ಸಿಎಂ ಆಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಶಿವಕುಮಾರ್ಗೆ ಸಿಎಂ ಸ್ಥಾನ ಕೊಡುವ ವಿಚಾರದಲ್ಲಿ ಸಂಶಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾವು ಒತ್ತಾಯ ಮಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಶಿವಕುಮಾರ್ ಅವರಿಗೆ ಸಿಎಂ ಆಗಲು ಒಮ್ಮೆ ಅವಕಾಶಕೊಡಬೇಕು. ನಮ್ಮ ಜನಾಂಗದ ನಾಯಕರಿಗೆ ಅನ್ಯಾಯವಾದರೆ ಕೈಕಟ್ಟಿ ಕೂರುವುದಿಲ್ಲ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಭಾಗದಲ್ಲಿ ಶಿವಕುಮಾರ್ ಸಿಎಂ ಆಗುತ್ತಾರೆಂಬ ಕಾರಣಕ್ಕಾಗಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳು ದೊರೆತಿವೆ. ನ್ಯಾಯೋಚಿತವಾಗಿ ಮೊದಲ ಅವಧಿಯಲ್ಲೇ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿತ್ತು. ಆದರೂ ನಮ್ಮ ಜನಾಂಗವು ಎರಡನೇ ಅವಧಿಯಲ್ಲಿ ಅವಕಾಶ ಸಿಗಬಹುದು ಎಂಬ ತಾಳ್ಮೆಯಿಂದ ಇತ್ತು. ನಾವು ಇನ್ನೊಬ್ಬರ ಅವಕಾಶ ಕೇಳುತ್ತಿಲ್ಲ. ಆದರೆ, ನಮ್ಮ ಜನಾಂಗಕ್ಕೆ ನ್ಯಾಯ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು.
ಅವಿರೋಧ ಆಯ್ಕೆ: ಒಕ್ಕಲಿಗರ ಸಂಘದ ಇತಿಹಾಸದಲ್ಲಿ ಮೊದಲ ಬಾರಿಗೆ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿದೆ. ಸಂಘದ ಅಭಿವೃದ್ಧಿಗೆ 35 ಮಂದಿ ನಿರ್ದೇಶಕರು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಸರ್ವ ಸದಸ್ಯರ ಸಭೆ ನಡೆಸುವುದು, ಬೈಲಾ ತಿದ್ದುಪಡಿ ಮಾಡುವುದು, ಎಲ್ಲ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ವಸತಿ ನಿಲಯ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್, ಟಿ.ಕೋನಪ ರೆಡ್ಡಿ, ಡಾ.ರೇಣುಕಾ ಪ್ರಸಾದ್, ಎಂ ಪುಟ್ಟಸ್ವಾಮಿ, ಡಾ.ಡಿ.ಕೆ.ರಮೇಶ್, ಖಜಾಂಚಿ ಕೆ.ವಿ.ಶ್ರೀಧರ್, ವೆಂಕಟರಾಮೇಗೌಡ, ಹನುಮಂತರಾಯಪ್ಪ, ಬಿ.ಪಿ.ಮಂಜೇಗೌಡ, ಜೆ.ರಾಜು, ಲೋಕೇಶ್, ಅಶೋಕ್ ಜಯರಾಮ್, ಎಲುವಳ್ಳಿ ರಮೇಶ್, ನಾಗರಾಜ್, ಆಡಿಟರ್ ನಾಗರಾಜ್ ಈ ವೇಳೆ ಉಪಸ್ಥಿತರಿದ್ದರು.







