ಪ್ರೊ.ಕೆ.ಎಸ್. ಭಗವಾನ್ ಬಂಧನಕ್ಕೆ ಒಕ್ಕಲಿಗರ ಸಂಘ ಪಟ್ಟು

ಪ್ರೊ.ಕೆ.ಎಸ್. ಭಗವಾನ್
ಬೆಂಗಳೂರು: ಒಕ್ಕಲಿಗರ ಸಮುದಾಯದ ಕುರಿತು ವಿವಾದಿತ ಮಾತುಗಳನ್ನಾಡಿರುವ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಅವರನ್ನು ಈ ಕೂಡಲೇ ಬಂಧಿಸಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಒತ್ತಾಯ ಮಾಡಿದೆ.
ಸೋಮವಾರ ನಗರದ ಒಕ್ಕಲಿಗರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಹನುಮಂತಯ್ಯ, ಭಗಾವನ್ ಅವರು ಪ್ರಚಾರದ ಆಸೆಯಿಂದ ಅವರು ನೀಡಿರುವ ಹೇಳಿಕೆ ಬಗ್ಗೆ ಕೂಡಲೇ ಸಮುದಾಯದ ಕ್ಷಮೆ ಕೇಳಬೇಕು. ಅವರಿಂದ ನಾವು ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಕ್ಕಲಿಗರ ಸಮುದಾಯದವರೇ. ರಾಜ್ಯ ಸರಕಾರ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸದಿದ್ದರೆ, ಸಂಘದ ಆಡಳಿತ ಮಂಡಳಿ ಈ ಬಗ್ಗೆ ಚರ್ಚೆ ನಡೆಸಿ ಮುಂದಿ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಇನ್ನೂ, ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿದ್ಧಪಡಿಸಿರುವ ವರದಿ ಅವೈಜ್ಷಾನಿಕವಾಗಿದ್ದು, ಸ್ವೀಕರಿಸಬಾರದು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಅವರು ನುಡಿದರು.
ಸಂಘದ ಗೌರವಾಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ನಮ್ಮ ಸಮುದಾಯಕ್ಕೆ ಅವಮಾನವಾಗಿ ರೀತಿ ಭಗವಾನ್ ಅವರು ಹೇಳಿಕೆ ನೀಡಿದ್ದಾರೆ. ಒಂದೂವರೆ ಕೋಟಿ ಜನರಿಗೆ ಅವಮಾನ ಮಾಡಿರುವ ಅವರ ಹೇಳಿಕೆ ಖಂಡಿಸುತ್ತೇವೆ. ಜಾತಿ ಜಾತಿ ನಡುವೆ ಒಡಕು ಉಂಟುಮಾಡುವ ಹೇಳಿಕೆಯನ್ನು ನೋಡಿದರೆ, ಪ್ರಾಧ್ಯಾಪಕರ ರೀತಿ ಮಾತನಾಡಿಲ್ಲ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಲ್.ಶ್ರೀನಿವಾಸ್, ಕಾರ್ಯಾಧ್ಯಕ್ಷ ಎಲುವಳಿ ರಮೇಶ್, ಕೆಂಪೇಗೌಡ ಆಸ್ಪ್ರತೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೆಲ್ಲಿಗೆರೆ ಬಾಲು, ಸಂಘದ ನಿರ್ದೇಶಕ ಬಿ.ಪಿ.ಮಂಜೇಗೌಡ, ಸಂಘದ ಖಚಾಂಚಿಗಳಾದ ಸಿ.ಎಂ.ಮಾರೇಗೌಡ ಸೇರಿದಂತೆ ಪ್ರಮುಖರಿದ್ದರು.







