ಬಸ್ ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ ಮಾ.3ಕ್ಕೆ ʼರಾಜಭವನ ಮುತ್ತಿಗೆ’, ಮಾ.22ಕ್ಕೆ ‘ಕರ್ನಾಟಕ ಬಂದ್’ : ವಾಟಾಳ್ ನಾಗರಾಜ್

ವಾಟಾಳ್ ನಾಗರಾಜ್
ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲಿನ ಹಲ್ಲೆಯನ್ನು ಖಂಡಿಸಿ ಮಾ.3ಕ್ಕೆ ರಾಜಭವನ ಮುತ್ತಿಗೆ ಹಾಕಲಾವುದು. ಅಲ್ಲದೆ, ಮಾ.22ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ‘ಕರ್ನಾಟಕ ಬಂದ್’ ಕರೆ ನೀಡಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ‘ಬೆಳಗಾವಿ ನಮ್ಮದು, ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಗೂಂಡಾಗಳ ವಿರುದ್ಧ ನಮ್ಮ ಹೋರಾಟ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿರುವ ಎಂಇಎಸ್ ಅನ್ನು ರಾಜ್ಯ ಸರಕಾರ ಕೂಡಲೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಕನ್ನಡದ ನೆಪದಲ್ಲಿ ಮರಾಠಿ ಗೂಂಡಾಗಳ ದಬ್ಬಾಳಿಕೆ ವಿರುದ್ಧ ಸರಣಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ವೇಳೆ ಎಂಇಎಸ್ ನಿಷೇಧ ಮಾಡುತ್ತೇವೆ ಎಂದಿದ್ದರು. ಆದರೆ ಅದು ಆಗಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯನವರು ಎಂಇಎಸ್ ನಿಷೇಧಿಸುವ ಕೆಲಸ ಮಾಡಬೇಕು ಎಂದು ವಾಟಾಳ್ ಆಗ್ರಹಿಸಿದರು.
ಸಭೆಯಲ್ಲಿ ಸಾರಾ ಗೋವಿಂದು, ಕರವೇ ಪ್ರವೀಣ್ ಶೆಟ್ಟಿ, ಕನ್ನಡ ಕುಮಾರ್, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಗಿರೀಶ್ ಗೌಡ, ರೂಪೇಶ್ ರಾಜಣ್ಣ ಸೇರಿದಂತೆ ಕನ್ನಡಪರ ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.







