ತಮಿಳುನಾಡಿಗೆ ನೀರು ಸ್ಥಗಿತ: ರೈತರ ಧರಣಿ ತಾತ್ಕಾಲಿಕ ಹಿಂದಕ್ಕೆ

ಮಂಡ್ಯ, ಸೆ.8: ಕೃಷ್ಣರಾಜಸಾಗರ(ಕೆಆರ್ ಎಸ್) ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಸ್ಥಗಿತ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ 9 ದಿನದಿಂದ ನಡಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ ಎಂದು ರೈತ ಹಿತ ರಕ್ಷಣಾ ಸಮಿತಿಯ ಮುಖಂಡರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮ್ಮುಖದಲ್ಲಿ ಘೋಷಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿದ್ದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನಾ ಧರಣಿ ನಡೆಸುತ್ತಾ ಬಂದಿದ್ದೆವು. ಇದೀಗ ರಾಜ್ಯ ಸರಕಾರ ಹರಿಸುತ್ತಿದ್ದ ನೀರನ್ನು ಸ್ಥಗಿತ ಮಾಡಿರುವುದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ಮುಖಂಡರು ಹೇಳಿದರು.
ಸಮಿತಿಯ ಮುಖಂಡರಾದ ಸುನಂದಾ ಜಯರಾಂ ಮಾತನಾಡಿ, ಕಾವೇರಿ ಕೊಳ್ಳದ ರೈತರ ಹಿತ ಕಾಪಾಡುವುದೇ ನಮ್ಮ ಪ್ರಮುಖ ಉದ್ದೇಶ. ಹಾಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದ್ದೇವೆ. ಯಾವುದೇ ಸರಕಾರ ಬರಲಿ ಕಾವೇರಿ ವಿಚಾರದಲ್ಲಿ ಎಲ್ಲರ ವಿರುದ್ಧವೂ ಹೋರಾಟ ಮಾಡಿದ್ದೇವೆ. ಅನ್ಯಾಯವಾದರೆ ಮುಂದೆಯೂ ಹೋರಾಟ ನಿರಂತರವಾಗಿರಲಿದೆ ಎಂದರು.
ಸಂಸದರು ಜಿಲ್ಲೆಯ ರೈತರ ಕಾಪಾಡಲು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕಾಯಿತು. ಕಾವೇರಿ ವಿಚಾರದಲ್ಲಿ ಸಮಗ್ರ ಚರ್ಚೆಯಾಗಬೇಕಾಗಿದ್ದು, ಕೂಡಲೇ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಹೋರಾಟಗಾರರ ಸಭೆ ಕರೆಯಬೇಕೆಂದು ಅವರು ಸಚಿವರಲ್ಲಿ ಮನವಿ ಮಾಡಿದರು.
ಸಂಸದೆ ಸುಮಲತಾ ಅಂಬರೀಶ್ ಕೇಂದ್ರದ ಮೇಲೆ ಒತ್ತಡ ಹಾಕಿ ರೈತರ ಪರ ಹೋರಾಟ ಮಾಡಲಿಲ್ಲ. ಕಾವೇರಿ ಜಲಾಯನ ಪ್ರದೇಶದ ಎಂಟು ಜಿಲ್ಲೆಗಳ ಸಂಸದರು ಸೇರಿ ರಾಜ್ಯದ ಎಲ್ಲಾ ಪಕ್ಷದ ಸಂಸದರು ಬಾಯಿ ತೆರೆಯಲಿಲ್ಲ ಅದೇಕೆ ಬಾಯಿ ಬಂದ್ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು.
ಸುಮಲತಾ ಅಂಬರೀಶ್‍ರದ್ದು ಸಂಸದರ ನಡೆ, ನಮ್ಮದು ಹೋರಾಟದ ನಡೆ. ಎಲ್ಲಾ ಸಂಘಸಂಸ್ಥೆಗಳ, ಕನ್ನಡಪರ, ಪ್ರಗತಿಪರ ಹೋರಾಟಗಾರರ ಸಹಕಾರದಿಂದ ಕಾವೇರಿ ಹೋರಾಟವನ್ನು ಇಷ್ಟು ದಿನ ಮುನ್ನಡೆಸಿದ್ದೇವೆ. ತಾತ್ಕಾಲಿಕವಾಗಿ ಧರಣಿ ವಾಪಸ್ ಪಡೆದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಸಹಕಾರ ಇರಲಿ ಎಂದು ಅವರು ಮನವಿ ಮಾಡಿದರು.
ಶಾಸಕ ರಮೇಶ್‍ಬಾಬು ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಎಂ.ಎಸ್.ಆತ್ಮಾನಂದ, ಕೆ.ಟಿ.ಶ್ರೀಕಂಠೇಗೌಡ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ರೈತಮುಖಂಡ ಕೆ.ಬೋರಯ್ಯ, ಇತರ ಮುಖಂಡರು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್ ಉಪಸ್ಥಿತರಿದ್ದರು.







