ಬೆಂಗಳೂರು | ಶಿವಾಜಿನಗರದಲ್ಲಿ ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಬಿದ್ದು, ನಾಲ್ವರು ಮೃತ್ಯು

ಬೆಂಗಳೂರು, ಆ.3: ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ ಕುಸಿದು ಬಿದ್ದು, ನಾಲ್ವರು ಮೃತಪಟ್ಟಿರುವ ದುರ್ಘಟನೆ ಬೆಂಗಳೂರಿನ ಶಿವಾಜಿನಗರದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಾಜಿನಗರದ ತರಕಾರಿ ವ್ಯಾಪಾರಿ ಅರುಳ್(40) ಹಾಗೂ ಕೋಟಾ ನಾಗೇಶ್ವರ ರಾವ್(32) ಕರನ್ ಥಾಪ (31) ಮೃತಪಟ್ಟಿದ್ದು, ಮತ್ತೋರ್ವನ ಮಾಹಿತಿ ತಿಳಿದುಬಂದಿಲ್ಲ.
ಬುಧವಾರ ರಾತ್ರಿ 10:30 ಸುಮಾರಿಗೆ ಶಿವಾಜಿನಗರದ ಬಸ್ ನಿಲ್ದಾಣದ ಸಮೀಪ ನಾಲ್ಕು ಅಂತಸ್ತಿನ ಕಟ್ಟಡದ ಪಕ್ಕದಲ್ಲಿ ತಳ್ಳುವ ಗಾಡಿ ನಿಲ್ಲಿಸಿಕೊಂಡು ತಿಂಡಿ ವ್ಯಾಪಾರ ಮಾಡುತ್ತಿದ್ದು, ಇನ್ನೂ ಕೆಲ ಮಂದಿ ಊಟಕ್ಕೆ ಸೇರಿದ್ದರು. ಈ ವೇಳೆ ನಾಲ್ಕು ಅಂತಸ್ತಿನ ಕಟ್ಟಡದ ಗೋಡೆನೀರಿನ ಟ್ಯಾಂಕ್‍ನಿಂದ ನೀರು ದಿಢೀರ್ ಸೋರಿಕೆಯಾಗಿ ಗೋಡೆ ಸಮೇತ ಟ್ಯಾಂಕ್ ಉರುಳಿ ಬಿದ್ದ ಪರಿಣಾಮ ಕೆಳಗೆ ಸಿಕ್ಕಿಕೊಂಡು ಅರುಳ್ ಹಾಗೂ ಕೋಟಾ ನಾಗೇಶ್ವರ ರಾವ್ ರಾತ್ರಿ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಕರನ್ ಥಾಪ ಹಾಗೂ ಮತ್ತೋರ್ವ ಚಿಕಿತ್ಸೆ ಫಲಿಸದೇ ಗುರುವಾರ ಮುಂಜಾನೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡು ಮೃತಪಟ್ಟಿದ್ದ ಇಬ್ಬರ ಶವಗಳನ್ನು ಹೊರ ತೆಗೆದು ಬೌರಿಂಗ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, ಬುಧವಾರ ರಾತ್ರಿ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೇಲ್ನೋಟಕ್ಕೆ ಕಟ್ಟಡದ ಮೇಲಿನ ಓವರ್ ಟ್ಯಾಂಕ್ ನಿರ್ಮಾಣವು ಅವೈಜ್ಞಾನಿಕತೆಯಿಂದ ಕೂಡಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.







