ನಮ್ಮ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಅರಿವು ಇದೆ: ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಬೆಳಗಾವಿ: ನಾವು ನೀಡುವ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಅರಿವು ನಮಗೂ ಇದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಾವು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಈ ವಿಚಾರದಲ್ಲಿ ಈಗಾಗಲೇ ಸ್ಪಷ್ಟಣೆ ನೀಡಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವ ಅಧಿಕಾರ ನಮಗಿಲ್ಲ. ಅದೆಲ್ಲ, ಹೈಕಮಾಂಡ್ ಗೆ ಬಿಟ್ಟ ವಿಚಾರ. ನಾವು ನೀಡುವ ಹೇಳಿಕೆಯನ್ನು ಸರಿಯಾಗಿ ಅರ್ಥೈಸದೆ ಮಾಧ್ಯಮಗಳು ಬೇರೆ ರೀತಿಯಲ್ಲೆ ಅದನ್ನು ಪ್ರಸಾರ ಮಾಡುವುದರಿಂದ ಗದ್ದಲ ನಿರ್ಮಾಣವಾಗಿವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಸಹಾಯ ಮಾಡಿದ್ದನ್ನು ಮರೆಯುವಂತಿಲ್ಲ. ಇಲ್ಲಿನ ಕಚೇರಿ ನಿರ್ಮಾಣಕ್ಕಾಗಿ ನೆರವು ನೀಡಿರುವ ಎಲ್ಲರಿಗೂ ಅದರ ಶ್ರೇಯಸ್ಸು ಸಿಗಬೇಕು. ಯಾರೋ ಒಬ್ಬರಿಗೆ ಸೀಮಿತಗೊಳಿಸಬಾರದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಹೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಸಾಮಥ್ರ್ಯ ನೋಡಿ ಸ್ಥಾನಮಾನ ಕೊಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಸತ್ಯವನ್ನೆ ಹೇಳಿದ್ದಾರೆ. ಪಕ್ಷ ಯಾರಿಗೂ ಸುಮ್ಮನೆ ಸ್ಥಾನಮಾನ ಕೊಡುವುದಿಲ್ಲ. ಅವರ ಸಾಮಥ್ರ್ಯ ಮತ್ತು ಜನಪ್ರಿಯತೆ ನೋಡಿಯೇ ಸ್ಥಾನಮಾನ ಕೊಡುತ್ತದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಜ.21ರಂದು ನಡೆಯಲಿರುವ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಹೊಸದಾಗಿ ಏನೂ ತಯಾರಿಗಳನ್ನು ಮಾಡಿಕೊಳ್ಳುವ ಅಗತ್ಯವಿಲ್ಲ. ಈ ಹಿಂದೆ ಮಾಡಿಕೊಂಡಿರುವ ಸಿದ್ಧತೆಗಳೆ ಮುಂದುವರೆಯುತ್ತದೆ. ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಾಗುವುದು. ಅದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಪಕ್ಷಾತೀತವಾಗಿ ಎಲ್ಲರಿಗೂ ಆಹ್ವಾನ ನೀಡಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಸಾರ್ವಜನಿಕ ಕಾರ್ಯಕ್ರಮವು ಪಕ್ಷದ ಭಾಗವಾಗಿದೆ. ಆದುದರಿಂದ, ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಅಂದಾಜು ಸುಮಾರು 2 ಲಕ್ಷ ಜನರನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು.







