‘ನಮ್ಮ ಬಳಿ ದುಡ್ಡಿಲ್ಲ’ ಎಂದ ಗೃಹ ಸಚಿವ ಡಾ.ಪರಮೇಶ್ವರ್ ವಿಡಿಯೊ ವೈರಲ್..!
►ತಮಾಷೆಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ ಗೃಹಸಚಿವ ►ದುಡ್ಡಿಲ್ಲ ಎಂದು ಪರಮೇಶ್ವರ್ ಮೂಲಕ ಸಿಎಂ ಹೇಳಿಸಿದ್ದಾರೆ ಎಂದ ಬಿಜೆಪಿ

ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬಾಗಲಕೋಟೆ: ‘ಚಾಲುಕ್ಯರ ರಾಜಧಾನಿ ಬಾದಾಮಿ ಅಭಿವೃದ್ಧಿಗೆ 1ಸಾವಿರ ಕೋಟಿ ರೂ.ಗಳ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಿ. ಆದರೆ, ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣನವರ ಹತ್ತಿರವು ದುಡ್ಡಿಲ್ಲ’ ಎಂದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಮವಾರ ಬಾಗಲಕೋಟೆಯ ಬಾದಾಮಿಯಲ್ಲಿ ಅಗ್ನಿಶಾಮಕ ದಳ ಠಾಣೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿರುವ ಡಾ.ಪರಮೇಶ್ವರ್ ಅವರು, ‘ಬಾದಾಮಿ ಅಭಿವೃದ್ಧಿಗೆ ದೊಡ್ಡದಾದ ಯೋಜನೆ ರೂಪಿಸಬೇಕು’ ಎಂದು ವೇದಿಕೆಯಲ್ಲಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಸಲಹೆ ಮಾಡಿದ್ದಾರೆ.
‘ಒಂದು ಸಾವಿರ ಕೋಟಿ ರೂ.ಅಷ್ಟು ದೊಡ್ಡ ಮೊತ್ತ ಎಂದ ಮೇಲೆ ಗಾಬರಿಯಾಗಬೇಡ. ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡು. ನಮ್ಮ ಹತ್ತಿರ ದುಡ್ಡಿಲ್ಲ, ಸಿದ್ದರಾಮಣ್ಣನ ಹತ್ತಿರ ದುಡ್ಡಿಲ್ಲ’ ಎಂದು ಡಾ.ಪರಮೇಶ್ವರ್ ಅವರು ಎರಡೆರಡು ಬಾರಿ ಉಚ್ಚರಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಪರಮೇಶ್ವರ್ ಅವರು, ‘ನಮ್ಮಲ್ಲಿದ್ದ ದುಡ್ಡೆಲ್ಲ ನಿಮಗೆ ಹಂಚಿದ್ದೇವೆ. ನಿಮಗೆ ಅಕ್ಕಿ, ಬೇಳೆ, ಎಣ್ಣೆ ಕೊಟ್ಟು ದುಡ್ಡು ಖಾಲಿಯಾಗಿದೆ. ಎಣ್ಣೆ ಸಚಿವರೂ ಇಲ್ಲಿಯೇ ಇದ್ದಾರೆ ಎಂದು ಅಬಕಾರಿ ಸಚಿವ ತಿಮ್ಮಾಪೂರ ಅವರ ಕಡೆಗೆ ನೋಡಿ ಡಾ.ಪರಮೇಶ್ವರ್ ಅವರು ನಗೆ ಚಟಾಕಿ ಸಿಡಿಸಿದ್ದಾರೆ. ಈ ವೇಳೆ ಸಭೆ ನಗೆಗಡಲಲ್ಲಿ ತೇಲಿದೆ.
ತಮಾಷೆಗೆ ಹೇಳಿದ್ದೆ: ರಾಜ್ಯ ಸರಕಾರದ ಬಳಿ ದುಡ್ಡಿಲ್ಲವೆಂದು ನಾನು ತಮಾಷೆಗೆ ಹೇಳಿದ್ದೇನೆ ಅಷ್ಟೇ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸರಕಾರದ ಬಳಿ ದುಡ್ಡಿಲ್ಲವೆಂದು ಹೇಳಿಲ್ಲ. ಯಾವುದೇ ರೀತಿಯ ಆರ್ಥಿಕ ಮುಗ್ಗಟ್ಟು ಇಲ್ಲ. ಹಣ ಬಿಡುಗಡೆ ಸ್ವಲ್ಪ ನಿಧಾನ ಅಥವಾ ಡಿಪಿಆರ್ ಮಾಡುವುದರಲ್ಲಿ ತಡ ಆಗಿರಬಹುದು ಎಂದು ತಿಳಿಸಿದರು.
ಯುವತಿ ಮೇಲೆ ಹಲ್ಲೆ ವಿಚಾರವಾಗಿ ಮಾತನಾಡಿ, ಇಂತಹ ಘಟನೆಗಳನ್ನು ಲಘುವಾಗಿ ಪರಿಗಣಿಸಲ್ಲ. ಕೂಡಲೇ ಪ್ರಕರಣ ದಾಖಲಿಸಿ ಬಂಧಿಸುತ್ತೇವೆ. ಇಂತಹ ಘಟನೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ಕಾಲ್ತುಳಿತ ಪ್ರಕರಣದ ವರದಿ ಕೇಂದ್ರಕ್ಕೆ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪೊಲೀಸ್ ವೈಫಲ್ಯ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ನಾನು ಆ ವರದಿಯನ್ನು ನೋಡಿಲ್ಲ. ಯಾವ ಅರ್ಥದಲ್ಲಿ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಏನಿದೆ ನೋಡಬೇಕು ಎಂದು ಹೇಳಿದರು.
ದುಡ್ಡಿಲ್ಲ ಎಂದು ಪರಮೇಶ್ವರ್ ಮೂಲಕ ಸಿಎಂ ಹೇಳಿಸಿದ್ದಾರೆ: ಬಿಜೆಪಿ
ಕಾಂಗ್ರೆಸ್ ಸರಕಾರ, ಶಾಸಕರಿಗೆ ಅನುದಾನ ನೀಡಲು ನಮ್ಮ ಬಳಿ ದುಡ್ಡಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಸಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ರಾಜ್ಯವನ್ನು ದಿವಾಳಿ ಮಾಡಿದೆ. ಖಾಲಿ, ಖಾಲಿ, ಸರಕಾರದ ಖಜಾನೆ ಖಾಲಿ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡಿದ್ದಾರೆ ಎಂದು ದೂರಿದೆ.
‘ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಬಗ್ಗೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಆರೋಪ ಮಾಡಿದ್ದರೆ, ಒಂದೆಡೆ ಅನುದಾನ ವಿಚಾರವಾಗಿ ಶಾಸಕ ರಾಜು ಕಾಗೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಒಂದು ಚರಂಡಿ ನಿರ್ಮಿಸಲು ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದ್ದರು.ಅದರ ಬೆನ್ನೆಲ್ಲೇ ಈಗ ಗೃಹ ಸಚಿವ ಪರಮೇಶ್ವರ್ ಅಭಿವೃದ್ಧಿ ಯೋಜನೆಗಳಿಗೆ ಸರಕಾರದ ಬಳಿ ಹಣ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಅನುದಾನವನ್ನೂ ನೀಡದೆ ಅಭಿವೃದ್ಧಿಯನ್ನೂ ಮಾಡದೆ ರಾಜ್ಯವನ್ನು ಕತ್ತಲೆಕೂಪಕ್ಕೆ ಕಾಂಗ್ರೆಸ್ ದೂಡುತ್ತಿದೆ. ಕಲೆಕ್ಷನ್-ಕಮಿಷನ್-ಕರಪ್ಷನ್ನಿಂದ ‘ಕೈ’ ಪೀಸ್ ಪೀಸ್ ಆಗುವುದು ಖಚಿತ-ನಿಶ್ಚಿತ-ಖಂಡಿತ ಎಂದು ಬಿಜೆಪಿ ಲೇವಡಿ ಮಾಡಿದೆ.
‘ಜನರ ಸಮಸ್ಯೆಗಳನ್ನು ಆಲಿಸದೆ ಕಿವುಡಾಗಿರುವ ಕಾಂಗ್ರೆಸ್ ಸರಕಾರ ಶಾಸಕರ ಅಹವಾಲುಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿದೆ. ಕಾಂಗ್ರೆಸ್ ಸರಕಾರ ಅನುದಾನಗಳನ್ನು ಸಮರ್ಪಕವಾಗಿ ನೀಡದೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಸಾಲು ಸಾಲು ಕಾಂಗ್ರೆಸ್ ಶಾಸಕರು ಸರಕಾರದ ವಿರುದ್ಧ ಬಂಡೇಳುತ್ತಿರುವುದು ಸಾಕ್ಷಿಯಾಗಿದೆ. ರಾಜ್ಯದಲ್ಲಿ ಶಾಸಕರ ಸ್ಥಿತಿಯೇ ಹೀಗಿರುವಾಗ ಇನ್ನು ಜನಸಾಮಾನ್ಯರ ಗತಿ ಏನೆಂದು ಚಿಂತಿಸುವಂತಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ನಾಡಿನ ಜನತೆಗೆ ಪೊಳ್ಳು ಭರವಸೆ ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್ ಇಂದು ತೀವ್ರ ನಿಗಾ ಘಟಕದಲ್ಲಿದೆ. ಕಾಂಗ್ರೆಸ್ನ ಜನವಿರೋಧಿ ಧೋರಣೆ ವಿರುದ್ಧ ಸ್ವಪಕ್ಷದ ಶಾಸಕರೇ ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಸಮರ್ಪಕವಾಗಿ ಗ್ಯಾರಂಟಿ ಯೋಜನೆ ಜಾರಿಗೆ ಬಂದಿಲ್ಲ, ಶಾಸಕರ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ, ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಾಚಾರ, ಕಮಿಷನ್ ವಹಿವಾಟು ಹಾಗೂ ಬೆಲೆ ಏರಿಕೆಯಿಂದ ಕಾಂಗ್ರೆಸ್ ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಮತದಾರರಿಗೆ ಮುಖ ತೋರಿಸದಂತಹ ಸ್ಥಿತಿ ಬಂದೊದಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಸ್ವಪಕ್ಷದ ಶಾಸಕರ ಮಾತಿಗೂ ಬೆಲೆ ಇಲ್ಲದ ಸ್ಥಿತಿ ಸಿದ್ದರಾಮಯ್ಯ ಸರಕಾರದಲ್ಲಿದೆ. ಲಂಚ ನೀಡದೆ ಯಾವುದೇ ಕಾಮಗಾರಿ, ಯೋಜನೆಗೆ ಮಂಜೂರಾತಿ ಆಗುತ್ತಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್ ಶಾಸಕರೇ ರಾಜೀನಾಮೆಗೆ ಮುಂದಾಗಿದ್ದಾರೆ. ಕಮಿಷನ್-ಕಲೆಕ್ಷನ್, ಜನವಿರೋಧಿ ನೀತಿಯ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರವನ್ನು ಸ್ವಪಕ್ಷದ ಶಾಸಕರೇ ಉರುಳಿಸಲಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
ಖಾಲಿ, ಖಾಲಿ, ಸರ್ಕಾರದ ಖಜಾನೆ ಖಾಲಿ!
— BJP Karnataka (@BJP4Karnataka) June 24, 2025
ಅವೈಜ್ಞಾನಿಕ ಗ್ಯಾರಂಟಿ ಯೋಜನೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡ @siddaramaiah ಸರ್ಕಾರ, ಶಾಸಕರಿಗೆ ಅನುದಾನ ನೀಡಲು ನಮ್ಮ ಬಳಿ ದುಡ್ಡಿಲ್ಲ ಅಂತ ಗೃಹ ಸಚಿವರ ಮೂಲಕ ಹೇಳಿಸಿದೆ.
ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದ @INCKarnataka ರಾಜ್ಯವನ್ನು ದಿವಾಳಿ… pic.twitter.com/D0NzOkEcLH