ನಿಖಿಲ್ ಸೋಲಿನ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ: ಎಚ್.ಡಿ. ಕುಮಾರಸ್ವಾಮಿ
"ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉತ್ತರ ಕೊಡುತ್ತೇವೆ"
Photo: X/@JanataDal_S
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಿಖಿಲ್ ಸೋಲಿನ ಜವಾಬ್ದಾರಿ ನಾನೇ ತೆಗೆದುಕೊಳ್ಳುತ್ತೇನೆ. ರಾಮನಗರ ಜಿಲ್ಲೆಯಿಂದ ಜೆಡಿಎಸ್ ಖಾಲಿ ಮಾಡಿಸಿದ್ದೇನೆ ಅಂದವರಿಗೆ ಮುಂದಿನ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶನಿವಾರ ಚನ್ನಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾವೇಶದಲ್ಲಿ ಪಾಳ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನ ಅಷ್ಟು ಸುಲಭವಾಗಿ ರಾಮನಗರ ಜಿಲ್ಲೆಯಿಂದ ಖಾಲಿ ಮಾಡಿಸಲು ಸಾಧ್ಯವಿಲ್ಲ. ನನ್ನ, ನಿಖಿಲ್ ರಾಜಕೀಯ ಇಲ್ಲಿಂದಲೇ ಆರಂಭ, ಇಲ್ಲಿಯೇ ಅಂತ್ಯ. ಮುಂದಿನ ಚುನಾವಣೆಯಲ್ಲಿ ಇದೇ ಚನ್ನಪಟ್ಟಣದಲ್ಲಿ 25 ಸಾವಿರ ಲೀಡ್ ಬರುತ್ತೆ ಎಂದು ಶಪಥ ಮಾಡಿದರು.
ಸಿಎಂ ಸಿದ್ದರಾಮಯ್ಯ ಹಾಸನದಲ್ಲಿ ಅಹಿಂದ ಸಮಾವೇಶ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಪುರುಷಾರ್ಥಕ್ಕೆ ಅಹಿಂದ ಸಮಾವೇಶ ಮಾಡ್ತಾರೆ. 17 ತಿಂಗಳಿನಿಂದ ಆ ಸಮುದಾಯಕ್ಕೆ ಏನು ರಕ್ಷಣೆ ಕೊಟ್ಟಿದ್ದಾರಾ? ಅವರ ಸ್ವಾಭಿಮಾನ ಉಳಿಸುವ ಕೆಲಸ ಮಾಡಿದ್ದೀರಾ? ಅವರ ಹಣವನ್ನ ಲೂಟಿ ಮಾಡಿರೋದೇ ಕೊಡುಗೆಯಾ? ಎಂದು ಕಿಡಿಕಾರಿದರು.
ವಾಲ್ಮೀಕಿ ನಿಗಮದ ಹಣ ದೋಚಿದ್ದು ಯಾರು? ಈಗ ಬೋವಿ ಜನಾಂಗದ ಹಣ ಲೂಟಿ ಮಾಡ್ತಿಲ್ವಾ? ನಿನ್ನೆ ಮಂಡ್ಯದಲ್ಲಿ ಅಬಕಾರಿ ಲಂಚಾವತಾರ ನೋಡಿಲ್ವಾ? 20 ಲಕ್ಷ, 40 ಲಕ್ಷ ಲಂಚ ಕೊಡಿ ಅಂತಿಲ್ವಾ? ಇದು ನಿಮ್ಮ ಸ್ವಾಭಿಮಾನವೇ, ಇದನ್ನೇ ಹಾಸನದಲ್ಲಿ ಮಾಡ್ತಿದ್ದೀರಾ? ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗ ಸ್ವಾಮೀಜಿಗೆ ನೋಟಿಸ್ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗೆ ನೋಟಿಸ್ ಕೊಟ್ಟಿರುವವರು ನನ್ನ ಮೇಲೆ ವರ್ಣನಿಂದನೆ ಮಾಡಿದ್ರಲ್ಲ ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಾ? ರಾಜ್ಯದಲ್ಲಿ ಅರಾಜಕತೆ ಪ್ರಾರಂಭ ಆಗುತ್ತೆ ನೋಡಿ. ಕಾಂಗ್ರೆಸ್ ನವರ ಓಲೈಕೆ ರಾಜಕೀಯ ಏನಾಗುತ್ತಿದೆ ಗೊತ್ತಿದೆ. ಓಲೈಕೆ ರಾಜಕಾರಣ ಬಿಡಲಿ ಅಂತ ಸ್ವಾಮೀಜಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದರು.
ಚನ್ನಪಟ್ಟಣ ಕ್ಷೇತ್ರದ ಜನ 87 ಸಾವಿರ ಮತ ನೀಡಿದ್ದಾರೆ. ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉತ್ತರ ಕೊಡುತ್ತೇವೆ. ಕಾರ್ಯಕರ್ತರ ಭಾವನೆ ನಿಖಿಲ್ ಚನ್ನಪಟ್ಟಣದಲ್ಲಿ ಇರಲಿ ಅಂತಿದೆ. ಆದರೆ ನಿಖಿಲ್ ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ನಾನು ಕೇಂದ್ರದಲ್ಲಿ ಮಂತ್ರಿ ಆಗಿದ್ದೇನೆ. ಈಗ ಪಕ್ಷದ ಸಂಘಟನೆಯ ಜವಾಬ್ದಾರಿ ನಿಖಿಲ್ ಮೇಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಅರೋಗ್ಯ ವ್ಯವಸ್ಥೆ ಹದಗೆಟ್ಟಿದೆ: ಕೆ.ಸಿ.ಜನರಲ್ ಆಸ್ಪತ್ರೆಗೆ ಲೋಕಾಯುಕ್ತ, ಉಪ ಲೋಕಾಯುಕ್ತ ಹೋಗಿದ್ದರು. ಇದೇನು ಆಸ್ಪತ್ರೆನೋ, ಭೂತಬಂಗಲೆನೋ ಅಂತ ಸ್ವತಃ ಅವರೇ ಹೇಳಿದ್ದಾರೆ. ರಾಜ್ಯದಲ್ಲಿ ಅರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಉದಾಹರಣೆ. ಸಚಿವರಿಗೆ ಮಾನ ಮರ್ಯಾದೆ ಇದ್ಯಾ.? ಎಂದು ಕುಮಾರಸ್ವಾಮಿ ಕಿಡಿಗಾರಿದರು.
ಯಾವುದೋ ಔಷಧಿ ಕೊಟ್ಟು ಬಳ್ಳಾರಿಯಲ್ಲಿ ಬಾಣಂತಿಯರು ಸಾವನ್ನಪ್ಪಿದ್ದಾರೆ. ಸರಕಾರದ ಯಾರಾದರೂ ಪ್ರತಿನಿಧಿ ಹೋಗಿದ್ದೀರಾ.? ನಿಮಗೆ ನಾಚಿಕೆ ಆಗಲ್ವಾ.? ನಮ್ಮ ಬಗ್ಗೆ ಮಾತನಾಡೊದಕ್ಕೆ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡ್ತೀರಾ ಎಂದು ಅರೋಗ್ಯ ಸಚಿವರನ್ನು ಅವರು ತರಾಟೆಗೆ ತೆಗೆದುಕೊಂಡರು.