ಪಶ್ಚಿಮಘಟ್ಟಗಳನ್ನು ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು: ಈಶ್ವರ ಖಂಡ್ರೆ

ಬೆಂಗಳೂರು : ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಪಾತ್ರ ಹಿರಿದಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಆಯೋಜಿಸಿದ್ದ ಜಾಗತಿಕ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗಸಭೆ–2026ರ ಪೂರ್ವಭಾವಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವಿಂದು ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕಾಲಘಟ್ಟದಲ್ಲಿ ನಿಂತಿದ್ದು, ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಸಮಗ್ರ ಪ್ರಗತಿಯ ಕಾರ್ಯತಂತ್ರಕ್ಕೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಚಾಲಕಶಕ್ತಿಯಾಗಿದೆ ಎಂದರು.
ಕರ್ನಾಟಕವು ಈ ಪಯಣದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಜೀವವೈವಿಧ್ಯತೆಯ ಅದ್ಭುತ ತಾಣವಾದ ಪಶ್ಚಿಮ ಘಟ್ಟಗಳನ್ನು ಹೊಂದಿದ್ದು, ಹಲವು ಬಗೆಯ ವಿಶಿಷ್ಟ ಸಸ್ಯ, ಪ್ರಾಣಿ, ಪಕ್ಷಿ ಹಾಗೂ ಕೀಟ ಸಂಕುಲಗಳ ತಾಣವಾದ ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಹಲವು ಜೀವನದಿಗಳ ಮೂಲವೇ ಪಶ್ಚಿಮ ಘಟ್ಟವಾಗಿದ್ದು, ಮಳೆಯ ಮಾರುತಗಳನ್ನು ತಡೆದು ದೇಶಾದ್ಯಂತ ವ್ಯಾಪಕವಾಗಿ ಮಳೆ ಸುರಿಯುವಂತೆ ಮಾಡುವ ಪಶ್ಚಿಮ ಘಟ್ಟಗಳನ್ನು ಉದ್ದಿಮೇದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು ಎಂದು ಹೇಳಿದರು.
ಬೆಂಗಳೂರು ನಗರ ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂಬ ಖ್ಯಾತಿ ಪಡೆದಿತ್ತು. ಇಂದು ಬೆಂಗಳೂರು ಕೂಡ ಕಾಂಕ್ರೀಟ್ ಕಾಡಾಗುತ್ತಿದ್ದು, ತಾಪಮಾನ ಏರಿಕೆಯ ಅನುಭವ ಆಗುತ್ತಿದೆ. ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಧೂಳು-ಹೊಗೆಯಿಂದ ವಾಯುಗುಣಮಟ್ಟವೂ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ದೆಹಲಿಯಂತೆ ಮತ್ತೊಂದು ಗ್ಯಾಸ್ ಚೇಂಬರ್ ಆಗದಂತೆ ತಡೆಯಲು ಈಗಿನಿಂದಲೇ ಕ್ರಮ ವಹಿಸುವುದು ಅತ್ಯಗತ್ಯ ಎಂದರು.
ಬೆಂಗಳೂರಿನಲ್ಲಿ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಬಳಿಕ ಸರಿ ಸುಮಾರು ಶತಮಾನದ ತರುವಾಯ 153 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ‘ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ’ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 50 ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಈ ಯೋಜನೆಗೆ ಸಿಎಸ್ಆರ್ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಅರಣ್ಯೀಕರಣ, ಕ್ಷೀಣಿಸಿದ ಅರಣ್ಯಗಳ ಮರುಸ್ಥಾಪನೆ ಮತ್ತು ನಗರ ಹಸಿರು ಹೊದಿಕೆ ಹೆಚ್ಚಳದಂತಹ ಉಪಕ್ರಮಗಳಲ್ಲಿ ಕೈಗಾರಿಕೋದ್ಯಮಿಗಳು ಸಕ್ರಿಯವಾಗಿ ಭಾಗವಹಿಸಿದರೆ, ಅದು ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನಿರ್ಮಲ ಪರಿಸರ ಹಾಗೂ ಸುಗಮ ಜೀವನವನ್ನು ಖಾತ್ರಿ ಪಡಿಸುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು. ಸಾರ್ವಜನಿಕರು ತಮ್ಮ ಮನೆಯ ಸೌಂದರ್ಯಕ್ಕೆ ಅಡ್ಡಿ ಯಾಗುತ್ತದೆ ಎಂಬ ಕಾರಣಕ್ಕೆ ಮರ-ಗಿಡಗಳನ್ನು ಕಡಿದುಹಾಕದೆ ಹಸಿರು ಉಳಿಸಬೇಕು. ಇಲ್ಲವಾದರೆ ಮುಂದೆ ಉಸಿರಾಟಕ್ಕೂ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ. ಉಪಗ್ರಹ ಮೇಲ್ವಿಚಾರಣೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಅರಣ್ಯ ನಿರ್ವಹಣೆಯಿಂದ ಹಿಡಿದು ನೀರಿನ ಸಂರಕ್ಷಣೆ ಹಾಗೂ ವನ್ಯಜೀವಿಗಳ ಚಲನವಲನದ ಮೇಲಿನ ನಿಗಾವರೆಗೆ ತಂತ್ರಜ್ಞಾನ ಹೊಸ ಪರಿಹಾರವಾಗಿದೆ. ಈ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲು ಉಪಕರಣಗಳ ಖರೀದಿಯಲ್ಲೂ ಸಿಎಸ್ಆರ್ ನಿಧಿ ಉಪಯುಕ್ತವಾಗಿದೆ ಎಂದರು.
“ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು. ಪ್ರಕೃತಿಯೂ ಉಳಿಯಬೇಕು, ಅಭಿವೃದ್ಧಿಯೂ ಆಗಬೇಕು. ಹಸಿರು ಉಳಿಸಿಕೊಂಡು ಅಭಿವೃದ್ಧಿ ಸಾಧಿಸುವುದೇ ಸುಸ್ಥಿರತೆಯ ಮಂತ್ರ. ಇದು ಇಂದಿನ ಅಗತ್ಯ ಹಾಗೂ ಅನಿವಾರ್ಯ. ಈ ಹಾದಿಯಲ್ಲಿ ನಡೆಯಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಉದ್ದಿಮೆಗಳ ಸಹಕಾರ ಅಗತ್ಯ,” ಎಂದು ಹೇಳಿದರು.
ಎಫ್‌ಕೆಸಿಸಿಐನ ಕೀರ್ತನ್ ಕುಮಾರ್ ಅವರು ಅರಣ್ಯ ಇಲಾಖೆ 10,000 ಸಸಿಗಳನ್ನು ನೀಡುತ್ತಿದ್ದು, ಅವುಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದರು.
ಅಧ್ಯಕ್ಷರಾದ ಉಮಾರೆಡ್ಡಿ, ನವ್ ಕಿಸ್ಲೆ, ಸಾಯಿ ಪ್ರಸಾದ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.






