ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಕಡೆಗಣಿಸಿ ಅವಮಾನಿಸಿದೆ ಎಂದು ಆ ಸಮುದಾಯದಲ್ಲಿ ಆಕ್ರೋಶವಿದೆ ಎಂಬ ಪ್ರಶ್ನೆಗೆ ಸುರ್ಜೆವಾಲಾ ಹೇಳಿದ್ದೇನು ?

Photo Credit: PTI Photo
ಬೆಂಗಳೂರು, ಎ.5: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಕಣದಲ್ಲಿ ಮುಸ್ಲಿಮ್ ನಾಯಕರನ್ನು ಕಡೆಗಣಿಸಿ ಅವಮಾನಿಸಲಾಗುತ್ತಿದೆ ಎಂದು ಆ ಸಮುದಾಯದಲ್ಲಿ ಆಕ್ರೋಶವಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, "ಸಂಜೆವರೆಗೂ ಕಾದು ನೋಡಿ" ಎಂದು ಪ್ರತಿಕ್ರಿಯಿಸಿದ್ದಾರೆ.
ರವಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆದಿದ್ದ ಅವರು, ಇದೇ ವೇಳೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೂ ಉತ್ತರಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಮ್ ನಾಯಕರನ್ನು ಕಡೆಗಣಿಸಿ, ಅವಮಾನಿಸಿದೆ ಎಂದು ಮುಸ್ಲಿಮ್ ಸಮುದಾಯದಲ್ಲಿ ಆಕ್ರೋಶವಿದೆ. ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ದಾವಣಗೆರೆ ಜಿಲ್ಲೆಯವರೇ ಆಗಿದ್ದಾರೆ. ಆದರೆ, ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಅವರು ಕಾಣುತ್ತಿಲ್ಲ ಏಕೆ? ಎಂದು ಕೇಳಿದ ಪ್ರಶ್ನೆಗೆ, ಸಂಜೆಯವರೆಗೂ ಕಾದು ನೋಡಿ ಎಲ್ಲವೂ ಸರಿಯಾಗಲಿದೆ ಎಂದು ಸುರ್ಜೆವಾಲಾ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ತಕ್ಕ ಪಾಠ ಕಲಿಸುತ್ತೇವೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಸ್ಲಿಮ್ ಮತದಾರರು ಬಹಿರಂಗವಾಗಿಯೆ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅವರ ಮನವೊಲಿಕೆಯ ಪ್ರಯತ್ನ ಕಾಂಗ್ರೆಸ್ ನಾಯಕತ್ವ ಮಾಡಿದೆಯೇ? ಎಂದು ಕೇಳಿದ ಪ್ರಶ್ನೆಗೆ, ಅಲ್ಲಿನ ಜನರ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದಕ್ಕಾಗಿ ಧನ್ಯವಾದಗಳು. ಪ್ರತಿಯೊಂದು ಸಂಗತಿಯನ್ನು ನಾವು ಗಮನಿಸುತ್ತಿದ್ದೇವೆ. ಚುನಾವಣಾ ಫಲಿತಾಂಶ ಅದಕ್ಕೆ ಉತ್ತರ ನೀಡಲಿದೆ ಎಂದು ಸುರ್ಜೆವಾಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ, ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಐಶ್ವರ್ಯಾ ಮಹಾದೇವ್ ಮತ್ತಿತರರು ಉಪಸ್ಥಿತರಿದ್ದರು.






