ಕಾನೂನು ಏನೇ ಇರಲಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದಂತೆ ಸರಕಾರ ನೋಡಿಕೊಳ್ಳಬೇಕು: ವೇದವ್ಯಾಸ್ ಕಾಮತ್

ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ರಾತ್ರಿ 10:30ರ ಬಳಿಕ ಕಾರ್ಯಕ್ರಮ ನಡೆಸಲು ಪೊಲೀಸರು ಅವಕಾಶ ನೀಡುತ್ತಾ ಇಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಕೋರ್ಟ್ ಆದೇಶ, ಸರಕಾರದ ಆದೇಶ ಎಂದು ಹೇಳ್ತಾರೆ. ನಮ್ಮ ಸರಕಾರ ಇದ್ದಾಗ ನ್ಯಾಯಾಲಯದ ಆದೇಶ ಇದ್ದರೂ ರಾತ್ರಿ ಕಾರ್ಯಕ್ರಮ ಆಯೋಜನೆಗೆ ತೊಂದರೆ ಆಗುತ್ತಿರಲಿಲ್ಲ. ಸರಕಾರ, ಕಾನೂನು ಏನೇ ಇರಲಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಯಾಗದಂತೆ ಸರಕಾರ ನೋಡಿಕೊಳ್ಳಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಒತ್ತಾಯಿಸಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಇಂದು ಮಾತನಾಡಿದ ಶಾಸಕ ಕಾಮತ್, ಇತ್ತೀಚೆಗೆ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಸಾರ್ವಜನಿಕ ಮೊಸರು ಕುಡಿಕೆ ವೇಳೆ ನಿಗದಿಗಿಂತ ಅಧಿಕ ಡೆಸಿಬಲ್ ನ ಧ್ವನಿವರ್ಧಕ ಬಳಸುತ್ತಿರುವ ಕಾರಣಕ್ಕೆ ಸೌಂಡ್ ಸಿಸ್ಟಮ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಕ್ರಮ ಆಯೋಜಕರ, ಸೌಂಡ್ ಸಿಸ್ಟಮ್ ನ ಮಾಲಕರ ವಿರುದ್ಧ ಕೇಸು ದಾಖಲಿಸಿದ್ದಾರೆ. ಇದಲ್ಲದೇ ರಾತ್ರಿ 10:30ರ ಬಳಿಕ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುತ್ತಿಲ್ಲ. ಕೋರ್ಟ್ ಆದೇಶವಿದ್ದರೂ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಕಾಂಗ್ರೆಸ್ ಸರಕಾರ ಬಂದ ಬಳಿಕ ಈ ರೀತಿ ತೊಂದರೆ ಆಗುತ್ತಿದೆ. ಮುಂಬರುವ ದಸರಾ, ಚೌತಿ ಹಬ್ಬದ ವೇಳೆ ಯಾವುದೇ ಸಮಸ್ಯೆ ಆಗದಂತೆ ಸರಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನಮ್ಮ ಸರಕಾರ ಇರುವಾಗಲೂ ರಾತ್ರಿ 10:30ರ ಬಳಿಕ ಕಾರ್ಯಕ್ರಮ ಆಯೋಜನೆಗೆ ನಿರ್ಬಂಧದ ಸುಪ್ರೀಂ ಕೋರ್ಟ್ ಆದೇಶ ಇತ್ತಾದರೂ ರಾಜ್ಯದ ಎಲ್ಲೂ ರಾತ್ರಿ ವೇಳೆ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಅಡ್ಡಿಯಾಗುತ್ತಿರಲಿಲ್ಲ. ಈಗ ರಾಜ್ಯದ ಯಾವ ಜಿಲ್ಲೆಯಲ್ಲೂ ಇಲ್ಲದ ಈ ನಿರ್ಬಂಧ ದ.ಕ. ಜಿಲ್ಲೆಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಾಂತಿ ಇದೆ, ನಿಮ್ಮ ಜಿಲ್ಲೆಯಲ್ಲಿ ಶಾಂತಿ ಇಲ್ಲ. ಶಾಂತಿ ಕಾಪಾಡಿ, ನಿಮಗೂ ಅವಕಾಶ ಕೊಡ್ತಾರೆ ಎಂದು ಛೇಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ಈ ದೇಶದಲ್ಲಿ ಕಾನೂನನ್ನು ತುಂಡು ಮಾಡಬಹುದು, ಆದರೆ ಸಂಪ್ರದಾಯವನ್ನು ತುಂಡು ಮಾಡುವುದು ಕಷ್ಟ ಎಂದರು.
ಎಲ್ಲಾ ಧರ್ಮದಲ್ಲೂ ಧಾರ್ಮಿಕ ಕಾರ್ಯಕ್ರಮಗಳೂ ರಾತ್ರಿಯ ವೇಳೆಯೇ ನಡೆಯುವುದರಿಂದ ಜನರಿಗೆ ಆಗುತ್ತಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರಕಾರ ಮುಂದಾಗಲಿ ಎಂದರು.







