‘ನೀವು ಯಾವಾಗ ಚುನಾವಣೆಗೆ ನಿಲ್ಲುತ್ತೀರಿ?’: ಚಕ್ರವರ್ತಿ ಸೂಲಿಬೆಲೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು
"ಧರ್ಮವನ್ನು ರಕ್ಷಿಸಲು ನಿಮ್ಮೊಂದಿಗೆ ಸೇರಲು ಬಿಜೆಪಿ ನಾಯಕರ ಮಕ್ಕಳನ್ನು ಯಾವಾಗ ಪ್ರೇರೇಪಿಸುತ್ತೀರಿ?"

ಪ್ರಿಯಾಂಕ್ ಖರ್ಗೆ / ಚಕ್ರವರ್ತಿ ಸೂಲಿಬೆಲೆ
ಬೆಂಗಳೂರು, ಜು. 30: ‘ನೀವು ಕರ್ನಾಟಕದ ಯುವಜನತೆಯೊಂದಿಗೆ ಸಾಕಷ್ಟು ತಮಾಷೆ, ಚೆಲ್ಲಾಟಗಳನ್ನು ಆಡಿದ್ದಾಗಿದೆ. ಈಗ ಒಂದಿಷ್ಟು ಪ್ರಾಮಾಣಿಕತೆಯಿಂದ ವರ್ತಿಸಿ. ನಿಮ್ಮ ಸುಳ್ಳಿಗೆ ಅದೆಷ್ಟು ಪರೆಸ್ಮೆಸ್ತಾರನ್ನು ಬಲಿ ಮಾಡಲಾಯಿತು. ಆ ಪ್ರಕರಣದಲ್ಲಿ ಸಿಬಿಐ ವರದಿ ಬಗ್ಗೆ ಮೌನ ಏಕೆ?’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲಿಬೆಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿವಾರ ಸೂಲಿಬೆಲೆ ಟ್ವೀಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಅವರು, ‘ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡುವ ನೀವು ಎಂದಿಗೂ ಮುಂಚೂಣಿಯಲ್ಲಿಲ್ಲ, ಯುವ ಅಮಾಯಕರಿಗೆ ಮಾತ್ರ ಮುನ್ನಡೆಸಲು ಅವಕಾಶ ನೀಡುತ್ತಿಲ್ಲವೇ? ನೀವು ಯೂಟ್ಯೂಬರ್ ಮತ್ತು ಪ್ರೇರಕರಾಗಿ ನಿಮ್ಮನ್ನು ಏಕೆ ಸೀಮಿತಗೊಳಿಸುತ್ತಿದ್ದೀರಿ? ನೀವು ಯಾವಾಗ ಚುನಾವಣೆಗೆ ನಿಲ್ಲುತ್ತೀರಿ, ಗೆಲ್ಲುತ್ತೀರಿ ಮತ್ತು ಯುವ ಕರ್ನಾಟಕವನ್ನು ಉಳಿಸುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ.
‘ಬಡ ಹಿಂದುಳಿದ ಮತ್ತು ದಲಿತ ಯುವಕರನ್ನು ಬಳಸಿಕೊಳ್ಳುವ ಬದಲು, ಧರ್ಮವನ್ನು ರಕ್ಷಿಸಲು ನಿಮ್ಮೊಂದಿಗೆ ಸೇರಲು ಬಿಜೆಪಿ ನಾಯಕರ ಮಕ್ಕಳನ್ನು ಯಾವಾಗ ಪ್ರೇರೇಪಿಸುತ್ತೀರಿ?, ಬಿಜೆಪಿ ಸರಕಾರದ ‘ಪುಣ್ಯಕೋಟಿ ದತ್ತು ಯೋಜನೆ’ಯಲ್ಲಿ ನೀವು ಎಷ್ಟು ಗೋವುಗಳನ್ನು ದತ್ತು ತೆಗೆದುಕೊಂಡಿದ್ದೀರಿ?. ಬಿಜೆಪಿ/ಆರೆಸೆಸ್ಸ್ ನಿಧಿಯ ಮೂಲಕ ಎಷ್ಟು ಗೋಶಾಲೆಗಳನ್ನು ನಿರ್ಮಿಸಲು ಸಹಾಯ ಮಾಡಿದ್ದೀರಿ?’ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
‘ನಿಮ್ಮ ಆರೆಸೆಸ್ಸ್ ಸಹೋದ್ಯೋಗಿಗಳು ಸೂಚಿಸಿದಂತೆ ನೀವು ಪ್ರತಿದಿನ ಗೋಮೂತ್ರವನ್ನು ಕುಡಿಯುತ್ತೀರಾ ಮತ್ತು ಹಸುವಿನ ಸಗಣಿಯನ್ನು ಒಮ್ಮೆ ತಿನ್ನುತ್ತೀರಾ?. ನಾಡಿನ ಪ್ರತಿಯೊಬ್ಬರೂ ಸಮಗ್ರತೆ, ರಾಜ್ಯದ ರಕ್ಷಣೆಗೆ ಎದ್ದು ನಿಲ್ಲುತ್ತಾರೆ. ನೀವು ಸುಳ್ಳನ್ನು ಹರಡಿ ತಪ್ಪು ಮಾಹಿತಿ ನೀಡಿ ಸಮಾಜದ ನಡುವೆ ದ್ವೇಷ ಸೃಷ್ಟಿಸಿರುವುದು ಸ್ಪಷ್ಟ. ನಿಮ್ಮ ಸುಳ್ಳಿನ ಬೇಳೆ ಬೇಯಿಸಿಕೊಳ್ಳಲು ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ’ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
‘ಕರ್ನಾಟಕದಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಅವರ ತಂಡ ಹೆಚ್ಚು ಸಕ್ರಿಯವಾಗಿದೆ. ಮುಖ್ಯಮಂತ್ರಿ ವಿರುದ್ಧ ನೀವು ಮಾತನಾಡಿದರೆ ಅದರ ಕೊನೆ ಜೈಲಾಗುತ್ತದೆ. ಕಾಂಗ್ರೆಸ್ ನಾಯಕರ ವಿರುದ್ಧ ಫ್ರಾಂಕ್ ಪೋಸ್ಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಇದು ಹಿಟ್ಲರ್ ಸರಕಾರವಲ್ಲದೆ ಮತ್ತೇನು?’ ಎಂದು ಚಕ್ರವರ್ತಿ ಸೂಲಿಬೆಲೆ, ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.