15.15 ಲಕ್ಷ ಕೋಟಿ ರೂ. ಆದಾಯ ಹೆಚ್ಚಾಗಿ ತೋರಿಸಿದ ಆರೋಪ; SEBI ನಿಷೇಧ ಎದುರಿಸುತ್ತಿರುವ ರಾಜೇಶ್ ಮೆಹ್ತಾ ಯಾರು?

ರಾಜೇಶ್ ಮೆಹ್ತಾ | Photo credit: businesstoday.in
ಬೆಂಗಳೂರು: ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ (REL) ಮತ್ತು ಅದರ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮೆಹ್ತಾ ವಿರುದ್ಧ ಮಾರುಕಟ್ಟೆ ನಿಯಂತ್ರಕ SEBI ಮಧ್ಯಂತರ ಎಕ್ಸ್–ಪಾರ್ಟೇ ಆದೇಶ ಹೊರಡಿಸಿದ್ದು, ಕಂಪೆನಿಯ ಹಣಕಾಸು ಹೇಳಿಕೆಗಳಲ್ಲಿ ಆದಾಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ ತೋರಿಸಿರುವುದು, ಪ್ರವರ್ತಕ-ಸಂಬಂಧಿತ ಘಟಕಗಳ ಮೂಲಕ ಕಂಪೆನಿಯ ಹಣವನ್ನು ವರ್ಗಾಯಿಸಿರುವುದು ಹಾಗೂ ಕಾರ್ಪೊರೇಟ್ ಆಡಳಿತದಲ್ಲಿ ಗಂಭೀರ ಲೋಪಗಳು ನಡೆದಿರುವುದಾಗಿ SEBI ಆರೋಪಿಸಿದೆ.
SEBIಯ ಪೂರ್ಣಾವಧಿ ಸದಸ್ಯ ಕಮಲೇಶ್ ಚಂದ್ರ ವರ್ಷ್ನಿ ಹೊರಡಿಸಿರುವ 109 ಪುಟಗಳ ಆದೇಶದ ಪ್ರಕಾರ, ಹಲವು ವರ್ಷಗಳಿಂದ ನಡೆದಿರುವ ವಹಿವಾಟುಗಳ ಮಾದರಿ, ಪ್ರಶ್ನಾರ್ಹ ಲೆಕ್ಕಪತ್ರ ಪದ್ಧತಿಗಳು, ಅಪೂರ್ಣ ಬಹಿರಂಗಪಡಿಸುವಿಕೆಗಳು ಹಾಗೂ ಪ್ರವರ್ತಕ ಗುಂಪಿಗೆ ಸಂಬಂಧಿಸಿದ ಘಟಕಗಳ ಮೂಲಕ ಕಂಪೆನಿಯ ನಿಧಿಗಳ ಮಾರ್ಗೀಕರಣದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ.
2021ರಿಂದ 2025ರ ನಡುವಿನ ಅವಧಿಯಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಸುಮಾರು 15.15 ಲಕ್ಷ ಕೋಟಿ ರೂ. ಮೊತ್ತದ ಏಕೀಕೃತ ಆದಾಯವನ್ನು ವಾಸ್ತವಕ್ಕಿಂತ ಹೆಚ್ಚಾಗಿ ತೋರಿಸಿದೆ ಎಂದು SEBI ಆರೋಪಿಸಿದೆ. ಈ ಮೊತ್ತವು ಕಂಪೆನಿಯ ವರದಿಯಾದ ಒಟ್ಟು ಏಕೀಕೃತ ಆದಾಯದ ಸುಮಾರು ಶೇ 99.8ರಷ್ಟಾಗಿದ್ದು, ಹಣಕಾಸು ಹೇಳಿಕೆಗಳ ನಿಖರತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಬುಧವಾರ ಹೊರಡಿಸಿದ ಮಧ್ಯಂತರ ಆದೇಶದಲ್ಲಿ, ಹಣಕಾಸು ಹೇಳಿಕೆಗಳಲ್ಲಿ ವಾಸ್ತವವನ್ನು ಮರೆಮಾಚಿರುವುದಲ್ಲದೆ, ಸಮರ್ಪಕ ದಾಖಲೆಗಳು ಅಥವಾ ಬಹಿರಂಗಪಡಿಸುವಿಕೆಗಳಿಲ್ಲದೆ ವೈಯಕ್ತಿಕ ಖಾತೆಗಳು ಮತ್ತು ಸಂಬಂಧಿತ ಘಟಕಗಳ ಮೂಲಕ ಹಣ ವರ್ಗಾವಣೆ ಹಾಗೂ ಲೇಯರಿಂಗ್ ನಡೆಸಿರುವ ನಿದರ್ಶನಗಳು ಪತ್ತೆಯಾಗಿವೆ ಎಂದು SEBI ಹೇಳಿದೆ.
ಕಂಪೆನಿಗೆ ಪದೇ ಪದೇ ಸಮನ್ಸ್ ಜಾರಿ ಮಾಡಲಾಗಿದ್ದು, ನಿಜವಾದ ಮತ್ತು ನ್ಯಾಯಯುತ ಹಣಕಾಸು ಹೇಳಿಕೆಗಳು, ನಿಧಿಗಳ ಅಂತಿಮ ಬಳಕೆ, ವ್ಯವಹಾರದ ತಾರ್ಕಿಕತೆ ಹಾಗೂ ಅಂತಿಮ ಫಲಾನುಭವಿಗಳ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಲು ಹಲವು ಅವಕಾಶಗಳನ್ನು ನೀಡಲಾಗಿತ್ತು. ಆದರೆ ಯಾವುದೇ ತೃಪ್ತಿಕರ ಪ್ರತಿಕ್ರಿಯೆ ದೊರೆತಿಲ್ಲ ಎಂದು SEBI ತಿಳಿಸಿದೆ.
RELನ ಕಾನೂನುಬದ್ಧ ಲೆಕ್ಕಪರಿಶೋಧಕರ ಸಹಕಾರದ ಕೊರತೆಯನ್ನೂ SEBI ಉಲ್ಲೇಖಿಸಿದೆ. ಲೆಕ್ಕಪರಿಶೋಧಕರು ಆಡಿಟ್ ಕಾರ್ಯಪತ್ರಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರೂ, ಅಂತಿಮವಾಗಿ ಅದನ್ನು ಸಲ್ಲಿಸಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಇಂತಹ ನಿರಂತರ ಅಸಹಕಾರವು ಪ್ರಮುಖ ಮಾಹಿತಿಯನ್ನು ಮರೆಮಾಚುವ ಹಾಗೂ ನಿಯಂತ್ರಕ ತನಿಖೆಗೆ ಅಡ್ಡಿಪಡಿಸುವ ಉದ್ದೇಶವನ್ನು ಸೂಚಿಸುತ್ತದೆ ಎಂದು ಸೆಬಿ ಅಭಿಪ್ರಾಯಪಟ್ಟಿದೆ.
ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ವ್ಯತ್ಯಾಸಗಳ ಪೈಕಿ, ಕಂಪೆನಿಯ ಆದಾಯದ ಶೇ 97ರಿಂದ ಶೇ 99ರವರೆಗೆ ಹೆಚ್ಚಾಗಿ ತೋರಿಸಿರುವ ಸಾಧ್ಯತೆ ಕಂಡುಬಂದಿದ್ದು, ಇದು ಅತ್ಯಂತ ಗಂಭೀರ ಹಾಗೂ ಅಪರೂಪದ ಪ್ರಕರಣವಾಗಿದೆ ಎಂದು SEBI ಹೇಳಿದೆ.
RELನಲ್ಲಿ ರಾಜೇಶ್ ಮೆಹ್ತಾ ಪ್ರಮುಖ ನಿರ್ಧಾರ ಕೈಗೊಳ್ಳುವ ಪ್ರಾಧಿಕಾರವಾಗಿದ್ದು, ಕಂಪೆನಿ ಮತ್ತು ಅದರ ಅಂಗಸಂಸ್ಥೆಗಳ ದೈನಂದಿನ ವ್ಯವಹಾರಗಳು ಹಾಗೂ ಹಣಕಾಸು ಕಾರ್ಯಾಚರಣೆಗಳ ಮೇಲೆ ಗಣನೀಯ ನಿಯಂತ್ರಣ ಹೊಂದಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಮುಂದಿನ ಆದೇಶದವರೆಗೆ ರಾಜೇಶ್ ಮೆಹ್ತಾ ಅವರಿಗೆ RELನ ಷೇರುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಖರೀದಿಸುವುದು, ಮಾರಾಟ ಮಾಡುವುದು ಅಥವಾ ವ್ಯವಹರಿಸುವುದನ್ನು SEBI ನಿಷೇಧಿಸಿದೆ.
ಯಾರು ರಾಜೇಶ್ ಮೆಹ್ತಾ?
ಜೂನ್ 20, 1964ರಂದು ಬೆಂಗಳೂರಿನಲ್ಲಿ ಜನಿಸಿದ ರಾಜೇಶ್ ಮೆಹ್ತಾ, ಚಿನ್ನ ಮತ್ತು ಆಭರಣ ಉದ್ಯಮದಲ್ಲಿ ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಪಡೆದ ಅವರು, ಉನ್ನತ ಶಿಕ್ಷಣವನ್ನು ಮುಂದುವರಿಸದೆ ತಂದೆಯ ಆಭರಣ ವ್ಯವಹಾರಕ್ಕೆ ಸೇರಿದ್ದರು.
1980ರ ದಶಕದ ಆರಂಭದಲ್ಲಿ ಭಾರತದ ಆಭರಣ ಉದ್ಯಮ ಬಹುತೇಕ ಅಸಂಘಟಿತವಾಗಿದ್ದ ಸಂದರ್ಭದಲ್ಲಿ, ಸಹೋದರ ಪ್ರಶಾಂತ್ ಮೆಹ್ತಾ ಅವರೊಂದಿಗೆ ಸೇರಿ ಹಿರಿಯ ಸಹೋದರರಿಂದ 1,200 ರೂ. ಸಾಲ ಪಡೆದು ಬೆಳ್ಳಿ ಆಭರಣ ಉದ್ಯಮ ಆರಂಭಿಸಿದ್ದರು. ಈ ಉದ್ಯಮವು ನಂತರ ದಕ್ಷಿಣ ಭಾರತದ ಪ್ರಮುಖ ಸಗಟು ಬೆಳ್ಳಿ ಆಭರಣ ವ್ಯವಹಾರಗಳಲ್ಲಿ ಒಂದಾಗಿ ಬೆಳೆಯಿತು. ಗುಜರಾತ್ ಮತ್ತು ಮುಂಬೈ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೂ ವಿಸ್ತರಿಸಿತು.
1995ರಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಆರಂಭಿಕ ಸಾರ್ವಜನಿಕ ಷೇರು ಮಾರಾಟ (IPO) ಮೂಲಕ 10 ಕೋಟಿ ರೂ. ಸಂಗ್ರಹಿಸಿ ಬಂಡವಾಳ ಮಾರುಕಟ್ಟೆಗೆ ಪ್ರವೇಶಿಸಿತು. ಬಳಿಕ ಚಿನ್ನದ ಸಂಸ್ಕರಣೆ, ಉತ್ಪಾದನೆ ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ಚಿನ್ನದ ಮೌಲ್ಯ ಸರಪಳಿಯ ವಿವಿಧ ಹಂತಗಳಿಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತು.
2015ರಲ್ಲಿ ಸ್ವಿಟ್ಜರ್ಲೆಂಡ್ ನ ಅಮೂಲ್ಯ ಲೋಹ ಸಂಸ್ಕರಣಾ ಸಂಸ್ಥೆ ವಾಲ್ಕಂಬಿಯನ್ನು 400 ಮಿಲಿಯನ್ ಡಾಲರ್ ಮೊತ್ತದ ಸಂಪೂರ್ಣ ನಗದು ಒಪ್ಪಂದದ ಮೂಲಕ ಸ್ವಾಧೀನಪಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ವಾಲ್ಕಂಬಿ ವಿಶ್ವದ ಅತಿದೊಡ್ಡ ಅಮೂಲ್ಯ ಲೋಹ ಸಂಸ್ಕರಣಾಗಾರಗಳಲ್ಲಿ ಒಂದಾಗಿದೆ.
ಫೋರ್ಬ್ಸ್ ಅಂದಾಜಿನ ಪ್ರಕಾರ, 2019ರ ಅಕ್ಟೋಬರ್ ವೇಳೆಗೆ ರಾಜೇಶ್ ಮೆಹ್ತಾ ಅವರ ನಿವ್ವಳ ಆಸ್ತಿ ಮೌಲ್ಯ 1.57 ಬಿಲಿಯನ್ ಡಾಲರ್ ಆಗಿತ್ತು.
LIC ಮೇಲೂ ಪರಿಣಾಮ?
ಕಂಪೆನಿ ಮತ್ತು ಅದರ ಪ್ರವರ್ತಕ ರಾಜೇಶ್ ಮೆಹ್ತಾ ವಿರುದ್ಧ SEBI ಮಧ್ಯಂತರ ಆದೇಶ ಹೊರಡಿಸಿದ ಬಳಿಕ ರಾಜೇಶ್ ಎಕ್ಸ್ಪೋರ್ಟ್ಸ್ ಷೇರುಗಳು ಶೇ 5ರಷ್ಟು ಕುಸಿದವು. ಇದರ ಪರಿಣಾಮವಾಗಿ ಕಂಪೆನಿಯಲ್ಲಿ ಶೇ 10.80ರಷ್ಟು ಪಾಲು ಹೊಂದಿರುವ ಭಾರತೀಯ ಜೀವ ವಿಮಾ ನಿಗಮದ (LIC) ಷೇರುಗಳೂ ಶೇ 1ಕ್ಕಿಂತ ಹೆಚ್ಚು ಇಳಿಕೆ ಕಂಡವು.
ಇತ್ತೀಚಿನ ಷೇರುದಾರರ ಮಾಹಿತಿಯ ಪ್ರಕಾರ, LIC ರಾಜೇಶ್ ಎಕ್ಸ್ಪೋರ್ಟ್ಸ್ ನ ಪ್ರಮುಖ ಸಾಂಸ್ಥಿಕ ಹೂಡಿಕೆದಾರರಲ್ಲಿ ಒಂದಾಗಿದೆ.






