IPL ಹರಾಜು ವಿದೇಶದಲ್ಲೇ ಏಕೆ? BCCIನಿಂದ ಸ್ಪಷ್ಟನೆ ಕೋರಿದ ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಕಾರ್ಯಕ್ರಮವನ್ನು ಭಾರತದಲ್ಲಿ ನಡೆಸದೆ ವಿದೇಶದಲ್ಲೇ ಏಕೆ ಆಯೋಜಿಸುತ್ತಿದ್ದಾರೆ ಎಂದು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಗಂಭೀರ ಪ್ರಶ್ನೆ ಎತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ನಿರ್ಧಾರದ ಹಿಂದಿನ ಕಾರಣಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದಲ್ಲಿ ಅಗತ್ಯ ಮೂಲಸೌಕರ್ಯಗಳು, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ಮತ್ತು ಸೌಲಭ್ಯಗಳು ಲಭ್ಯವಿರುವ ಸಂದರ್ಭದಲ್ಲಿ, ಐಪಿಎಲ್ನಂತಹ ಪ್ರಮುಖ ಹಾಗೂ ಭಾರಿ ಹಣಕಾಸು ಹೊಂದಿರುವ ಕ್ರೀಡಾ ಲೀಗ್ಗೆ ಸಂಬಂಧಿಸಿದ ಮಹತ್ವದ ಕಾರ್ಯಕ್ರಮವನ್ನು ಮತ್ತೆ ಮತ್ತೆ ವಿದೇಶದಲ್ಲಿ ನಡೆಸುತ್ತಿರುವುದು ಏಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಇದು ಅನಿವಾರ್ಯ ಪರಿಸ್ಥಿತಿಯ ಫಲವೇ ಅಥವಾ ಉದ್ದೇಶಿತ ನಿರ್ಧಾರವೇ ಎಂಬುದನ್ನು ಸಾರ್ವಜನಿಕವಾಗಿ ಚರ್ಚಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ರೀತಿಯ ನಿರ್ಧಾರವನ್ನು ಬೇರೆ ಯಾರಾದರೂ ಕೈಗೊಂಡಿದ್ದರೆ ಅವರನ್ನು ತಕ್ಷಣವೇ ‘ರಾಷ್ಟ್ರವಿರೋಧಿ’ ಎಂದು ಗುರುತಿಸಲಾಗುತ್ತಿತ್ತು. ಆದರೆ ಬಿಸಿಸಿಐಯ ಪ್ರತಿಯೊಂದು ನಿರ್ಧಾರವನ್ನೂ #VikshitBharath ಹೆಸರಿನಲ್ಲಿ ಸಮರ್ಥಿಸಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.







