ರಾಜ್ಯದ ಜನತೆ 136 ಸ್ಥಾನ ನೀಡಿರುವುದು ಕಾಂಗ್ರೆಸ್ ಸರಕಾರಕ್ಕೆ, ನಾನೇಕೆ ಕೇಂದ್ರದ ಬಳಿ ಅನುದಾನ ಕೇಳಲಿ?: ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ಜನತೆ 136 ಸ್ಥಾನ ನೀಡಿರುವುದು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ. ಆದರೆ, ಕೇಂದ್ರ ಸರಕಾರದ ಬಳಿ ನಾನೇಕೆ ಅನುದಾನ ಕೇಳಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ಅನುದಾನ ಕೇಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ, ನಾನೇಕೆ ಅನುದಾನ ಕೇಳಲಿ? ಜನ 136 ಸ್ಥಾನ ನೀಡಿರುವುದು ನಿಮಗೆ. ನಾನು ಯಾಕೆ ಮಾತಾಡಲಿ ಎಂದು ತಿಳಿಸಿದರು.
ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದುಡ್ಡು ಕೊಡಲಿಲ್ಲ. ಆಗ ಮೋದಿ ದುಡ್ಡು ಕೊಡಲಿಲ್ಲ ಎಂದು ಕೈಕಟ್ಟಿ ಕುಳಿತಿಲ್ಲ. ಪ್ರವಾಹ ಬಂದಾಗ ಕೊಡಗಿನಲ್ಲಿ 1000 ಮನೆ ಕಟ್ಟಿಸಿದ್ದೇನೆ. ಇವರಿಗೆ ಅಂತಹ ಯೋಗ್ಯತೆ, ಇಚ್ಛಾಶಕ್ತಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಚರ್ಚೆ ಮಾಡುವಷ್ಟು ಯೋಗ್ಯತೆ ಉಳಿಸಿಕೊಂಡಿಲ್ಲ:
‘ಬಹಿರಂಗ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಚರ್ಚೆ ಮಾಡುವಷ್ಟು ಯೋಗ್ಯತೆ ಆ ವ್ಯಕ್ತಿಗೆ ಇಲ್ಲ ಎಂದು ಟೀಕಿಸಿದರು.
ಅವರಂತೆ ದುಡ್ಡು ಹೊಡೆಯೋ ಕೆಲಸ ನಾನು ಮಾಡಿಲ್ಲ. ನಾನು ಸಿಎಂ ಆಗಿದ್ದಾಗ ಏನೇನು ಕೆಲಸ ಮಾಡಿದ್ದೇನೆ ನೋಡಲಿ. ಕೇಂದ್ರದಲ್ಲಿ ನನ್ನ ಖಾತೆಗಳು ಏನು? ಅವುಗಳ ಕಾರ್ಯವ್ಯಾಪ್ತಿ ಏನು? ಎಂಬುದನ್ನು ಮೊದಲು ತಿಳಿಯಲಿ. ನನ್ನ ಇಲಾಖೆ ಕಾರ್ಖಾನೆಯ ಇಲಾಖೆ ಅಲ್ಲ. ಕೆಲವು ನೀತಿಗಳನ್ನು ರೂಪಿಸುವ, ಕೆಲ ಉತ್ತೇಜನಕಾರಿ ಸೌಲಭ್ಯಗಳನ್ನು ನೀಡುವ ಇಲಾಖೆ. ಬೃಹತ್ ಕೈಗಾರಿಕೆ ಖಾತೆ ಎಂದರೆ ಕಾರ್ಖಾನೆ ಸ್ಥಾಪನೆ ಮಾಡುವ ಖಾತೆ ಅಲ್ಲ. ಆದರೂ ನನ್ನ ಕೆಲಸ ನಾನು ಮಾಡುತ್ತಿದ್ದೇನೆ ಎಂದರು.







