ಇದು ನನ್ನ ವಿರುದ್ಧ ದೊಡ್ಡ ಕುತಂತ್ರದ ಭಾಗ, ಕಾನೂನು ಹೋರಾಟ ನಡೆಸುತ್ತೇನೆ: ಭ್ರಷ್ಟಚಾರ ಆರೋಪದ ಕುರಿತು ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯೆ

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ
ಬೆಂಗಳೂರು: ಉದ್ದೇಶಪೂರಕವಾಗಿ ಭ್ರಷ್ಟಚಾರ ಆರೋಪ ಮಾಡಲಾಗುತ್ತಿದ್ದು, ಇದು ನನ್ನ ವಿರುದ್ಧ ದೊಡ್ಡ ಕುತಂತ್ರದ ಭಾಗವಾಗಿದೆ. ಈ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ.
ಸೋಮವಾರ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ಸಿಎಲ್ ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಿ ಆಡಿಯೊ ಒಂದನ್ನು ಹರಿಬಿಡಲಾಗಿದೆ. ಆದರೆ, ಇದರಲ್ಲಿ ನನ್ನ ಮಗ ಏಕೆ ಬರುತ್ತಾನೆ? ಆಡಿಯೊದಲ್ಲಿ ಅನೇಕರ ಹೆಸರನ್ನು ಹೇಳುತ್ತಾರೆ. ಇಂತಹ ಆರೋಪಗಳು ನನಗೆ ಬೇಸರ ತಂದಿದ್ದು, ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದರು.
ನನ್ನ ತೇಜೋವಧೆ ಮಾಡುವ ಕೆಲಸ ನಡೆದಿದೆ. ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ. ಅಲ್ಲದೆ, ಈ ಪ್ರಕರಣದಲ್ಲಿ ನನ್ನದು ಯಾವುದೇ ರೀತಿಯ ತಪ್ಪಿಲ್ಲ. ಒಟ್ಟಿನಲ್ಲಿ ಕಾನೂನು ಸಲಹೆಗಾರರ ಸಲಹೆ ಪಡೆದು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರು.





