ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗೆ ಆಗ್ರಹಿಸಿ ಪಿಐಎಲ್: ಅಗ್ನಿ ಶ್ರೀಧರ್

ಬೆಂಗಳೂರು: ‘ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಧರ್ಮಸ್ಥಳ ಮೂಲದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣವೂ ಸೇರಿದಂತೆ ಅಲ್ಲಿ ನಡೆದ ಎಲ್ಲ ಅಸಹಜ ಸಾವು ಪ್ರಕರಣಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‍ನಲ್ಲಿ ಸಲ್ಲಿಸಲಾಗುವುದು’ ಎಂದು ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸೌಜನ್ಯ ಕೇವಲ ಧರ್ಮಸ್ಥಳ ಗ್ರಾಮದ ಮಗಳಾಗಿ ಇವತ್ತು ಉಳಿದಿಲ್ಲ, ಇಡೀ ರಾಜ್ಯದ ಪ್ರತಿ ಮನೆಗೂ ತಲುಪಿದ್ದಾಳೆ. ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಕೇಳುತ್ತಿದ್ದಾಳೆ. ಅಪಾರ ಪ್ರಮಾಣದಲ್ಲಿ, ಜನ ಬೀದಿಗೆ ಇಳಿದು ಆಕೆಯ ಸಾವಿಗೆ ನ್ಯಾಯ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಹಲವು ಸಲಹೆಗಳನ್ನು ಮುಂದಿಡಲಾಗುತ್ತಿದೆ. ಇದರಲ್ಲಿ ಮಂಪರು ಪರೀಕ್ಷೆ ನಿರರ್ಥಕ’ ಎಂದು ಹೇಳಿದರು.
ಪ್ರಕರಣ ಮರು ತನಿಖೆಗಾಗಿಯೂ ಬೇಡಿಕೆ ಕೇಳಿ ಬರುತ್ತಿದೆ. ಈ ಸಮಯದಲ್ಲಿ ಪ್ರಕರಣದ ಕುರಿತು ಸಾಕಷ್ಟು ಆಳಕ್ಕೆ ಇಳಿದಿದ್ದೇವೆ. ಸೌಜನ್ಯ ಮಾತ್ರ ಅಲ್ಲ ಅದಕ್ಕೂ ಮೊದಲು ಧರ್ಮಸ್ಥಳದಲ್ಲಿ ಒಟ್ಟು 462 ಪ್ರಕರಣಗಳು ನಡೆದಿವೆ. ಇವೆಲ್ಲಾ ಪ್ರಕರಣಗಳಲ್ಲಿಯೂ ದೇಹ ಸಿಕ್ಕಿದೆ, ಆದರೆ ತನಿಖೆಯ ಯಾವ ಪ್ರಕ್ರಿಯೆಗಳು ನಡೆದಿಲ್ಲ. ಆದರೆ ಸೌಜನ್ಯ ಪ್ರಕರಣ ಬೆಳಕಿಗೆ ಬಂದ ನಂತರ ಧರ್ಮಸ್ಥಳದಲ್ಲಿ ಅಸಹಜ ಸಾವುಗಳು ನಿಂತು ಹೋಗಿವೆ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದರು.
ಸೌಜನ್ಯ ಪ್ರಕರಣದಲ್ಲಿ ಅತ್ಯಾಚಾರ ನಡೆದಿಲ್ಲ ಕೊಲೆ ನಡೆದಿದೆ ಎಂದು ಕೆಲವು ಪೊಲೀಸ್ ಅಧಿಕಾರಿಗಳು ತಿಳಿಸುತ್ತಾರೆ. ಇದೇನೇ ಇದ್ದರೂ, ಪ್ರಕರಣದ ತೀವ್ರತೆ ಏನೂ ಕಡಿಮೆಯಾಗುವುದಿಲ್ಲ, ಈ ಪ್ರಕರಣವನ್ನೂ ಒಳಗೊಂಡಂತೆ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಅಸಹಜ ಸಾವುಗಳ ಬಗ್ಗೆ ಹೊಸತಾಗಿ, ಹೊಸ ಆಯಾಮದಿಂದ ತನಿಖೆಗೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು 15 ದಿನಗಳ ಒಳಗೆ ಸಲ್ಲಿಕೆಯಾಗಲಿದೆ ಎಂದು ಅಗ್ನಿಶ್ರೀಧರ್ ತಿಳಿಸಿದರು.
ಪತ್ರಕರ್ತ, ಹೋರಾಟಗಾರ ಇಂದೂಧರ ಹೊನ್ನಾಪುರ ಮಾತನಾಡಿ, ಸೌಜನ್ಯ ಪ್ರಕರಣ ಸರಕಾರ ಹಾಗೂ ನ್ಯಾಯಾಂಗದ ಬದ್ಧತೆಯನ್ನು ಪ್ರಶ್ನೆ ಮಾಡುತ್ತಿದೆ. 11 ವರ್ಷಗಳ ನಂತರವೂ ನ್ಯಾಯ ಮರೀಚಿಕೆಯಾಗಿದೆ ಎಂದರು.
ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ‘ಸೌಜನ್ಯ ಪ್ರಕರಣ ತೀರಾ ಗುಟ್ಟಿನ ಸಂಗತಿ ಏನಲ್ಲ. ಸ್ಥಳೀಯರಿಗೆ ಎಲ್ಲ ಮಾಹಿತಿ ಇದೆ. ಪ್ರಕರಣದ ತನಿಖೆಯನ್ನು ಬಲಾಢ್ಯರು ಸೇರಿಕೊಂಡು ದಿಕ್ಕು ತಪ್ಪಿಸಿದ್ದಾರೆ. ಸಮರ್ಥ ತಂಡವೊಂದು ಇಚ್ಚಾಶಕ್ತಿಯಿಂದ ತನಿಖೆ ನಡೆಸಿದೆ ಸಾಕ್ಷಿಗಳನ್ನು ನೀಡಲು ಸ್ಥಳೀಯ ವೇದಿಕೆ ಸಿದ್ಧವಿದೆ. ಅದು ಮಾತ್ರವೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಬಲ್ಲದು ಎಂದರು.
ಸಾಹಿತಿ ಪ್ರೊ.ಎಲ್.ಎನ್.ಮುಕುಂದರಾಜ್ ಮಾತನಾಡಿ, ಸೌಜನ್ಯ ಮಾತ್ರವಲ್ಲ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರ ನಡೆಯುತ್ತಿವೆ. ಮತೀಯ ವ್ಯಕ್ತಿಗಳು ಇಂತಹ ಪ್ರಕರಣಗಳಿಗೆ ಪ್ರೇರೇಪಿಸುತ್ತಿರುವುದು ಶೋಚನೀಯ. ಈ ವಿಚಾರವಾಗಿ ಎಲ್ಲರಿಗೂ ಜಾಗೃತಿ ಮೂಡಿಸಬೇಕಿದೆ. ಸೌಜನ್ಯ ಪ್ರಕರಣದ ಮರು ತನಿಖೆಗಾಗಿ ವಿವಿಧ ಸಂಘ ಸಂಸ್ಥೆಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಸರಕಾರವು ಇದಕ್ಕೆ ಸರಿಯಾದ ದಿಕ್ಕನ್ನು ತೋರಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರ್ತಿ ಪ್ರಭಾ ಬೆಳವಂಗಲ ಮಾತನಾಡಿ, ಧರ್ಮಸ್ಥಳದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹತ್ತೂ ಹಲವು ಪ್ರಕರಣಗಳು ನಡೆದಿದ್ದು, ಎಲ್ಲವೂ ನೇತ್ರಾವತಿಯಲ್ಲಿ ಕೊಚ್ಚಿಹೋಗಿವೆ. ಸೌಜನ್ಯ ಪ್ರಕರಣ ಮುಚ್ಚಿ ಹೋದರೆ, ಕರ್ನಾಟಕ ಮಣಿಪುರ ಆಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ನಾವೆಲ್ಲ ಬದ್ಧರಾಗಬೇಕಾಗಿದೆ. ಸಾವಿನ ವಿರುದ್ಧದ ಹೋರಾಟ ನಡೆಯುತ್ತಿದೆ. ಅಪರಾಧಿಗಳನ್ನು ಕಂಡು ಹಿಡಿದು, ಅವರಿಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ದಲಿತ ಮುಖಂಡ ವಿ.ನಾಗರಾಜ್, ಪತ್ರಕರ್ತ ಪಾರ್ವತೀಶ ಬಿಳಿದಾಳೆ, ವಕೀಲ ಜೆ.ಬಿ.ಶ್ರೀನಿವಾಸ್ ಇದ್ದರು.
‘ಧರ್ಮಸ್ಥಳದ ಭಕ್ತರು ಸೇರಿದಂತೆ ಎಲ್ಲರೂ ಸೌಜನ್ಯಕ್ಕೆ ನ್ಯಾಯ ಕೊಡಲಿಸಲು ಮುಂದಾಗಿದ್ದಾರೆ. ಭಾವನಾತ್ಮಕ ಹೋರಾಟದ ಜತೆಗೆ ಕಾನೂನಾತ್ಮಕ ಹೋರಾಟ ಅತ್ಯಗತ್ಯ. ನಮ್ಮ ಕಾನೂನು ವ್ಯವಸ್ಥೆ ನಿಂತ ನೀರಲ್ಲ. ತನಿಖೆ ತಡೆಹಿಡಿಯುತ್ತಿರುವುದು ಎದ್ದು ಕಾಣುತ್ತಿದೆ. ಸೌಜನ್ಯ ಪ್ರಕರಣದಲ್ಲಿ ಹೊಸ ತನಿಖೆ ಪ್ರಾರಂಭಿಸಬೇಕಿದ್ದು, ಇದರ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು’
-ಅಗ್ನಿಶ್ರೀಧರ್, ಪತ್ರಕರ್ತ







